ಬಿಜೆಪಿ ಕುರಿತ ಧೋರಣೆ ಬದಲಾದ ಸಂಕೇತ...?
ಕಮಲದ ಚಿತ್ರಕ್ಕೆ ಬಣ್ಣ ತುಂಬಿದ ನಿತೀಶ್ ಕುಮಾರ್
ಪಾಟ್ನಾ, ಫೆ.5: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ನಡುವಿನ ಮನಸ್ತಾಪ ಕ್ರಮೇಣ ದೂರವಾಗುತ್ತಿದೆಯೇ ಎಂಬ ಅನುಮಾನಕ್ಕೆ ಇಂಬು ಕೊಡುವಂತೆ, ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಕಮಲದ ಹೊವಿನ ಚಿತ್ರವೊಂದಕ್ಕೆ ಬಣ್ಣ ತುಂಬುವ ಮೂಲಕ ಗಮನ ಸೆಳೆದರು.
ಪಾಟ್ನಾ ಪುಸ್ತಕ ಉತ್ಸವದಲ್ಲಿ ಮಿಥಿಲಾ ಶೈಲಿಯ ಖ್ಯಾತ ಚಿತ್ರಕಲಾವಿದೆ, ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ವಿಜೇತೆ ಬವಾ ದೇವಿ ಕ್ಯಾನ್ವಾಸ್‌ನಲ್ಲಿ ಕಮಲದ ಹೂವಿನ ಚಿತ್ರವೊಂದನ್ನು ಬರೆದರು. ಈ ಚಿತ್ರಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣ್ಣ ತುಂಬುವ ಮೂಲಕ ಜೆಡಿಯು ಮತ್ತು ಬಿಜೆಪಿ ನಡುವಿನ ಈ ಹಿಂದಿನ ಸ್ನೇಹ ಸಂಬಂಧ ಮತ್ತೆ ಬೆಸೆಯಲಿದೆ ಎಂಬ ಊಹಾಪೋಹಕ್ಕೆ ನೀರೆರೆದರು. ಬಿಜೆಪಿ ನೇತೃತ್ವದ ಎನ್‌ಡಿಯ ಮೈತ್ರಿಕೂಟದ ಸಹಪಕ್ಷವಾಗಿದ್ದ ಜೆಡಿಯು, 2014ರ ಚುನಾವಣೆ ವೇಳೆ ಮೈತ್ರಿಕೂಟದಿಂದ ಬೇರ್ಪಟ್ಟಿತ್ತು. ಆದರೆ ಕಳೆದ ಕೆಲ ದಿನಗಳಿಂದ ಉಭಯ ಪಕ್ಷಗಳ ನಾಯಕರ ವರ್ತನೆ, ನೀಡುತ್ತಿರುವ ಹೇಳಿಕೆ ಗಮನಿಸಿದರೆ ಎರಡೂ ಪಕ್ಷಗಳ ನಾಯಕರು ತಮ್ಮ ವಿರಸ ಮರೆತಿದ್ದಾರೆಯೇ ಎಂಬ ಅನುಮಾನ ಮೂಡಿಸಿತ್ತು. ಪ್ರಧಾನಿ ಮೋದಿಯ ತೀವ್ರ ಟೀಕಾಕಾರರಲ್ಲಿ ಓರ್ವರಾಗಿದ್ದ ನಿತೀಶ್, ನೋಟುಗಳ ಅಮಾನ್ಯ ವಿಚಾರದಲ್ಲಿ ಮೋದಿಯನ್ನು ಬೆಂಬಲಿಸುವ ಮೂಲಕ ಹಲವರ ಹುಬ್ಬೇರಿಸಿದ್ದರು. ಅಲ್ಲದೆ ಇತ್ತೀಚೆಗೆ ಬಿಹಾರದಲ್ಲಿ ನಡೆದ ಮದ್ಯಪಾನ ವಿರೋಧಿ ಅಭಿಯಾನದ ಬಗ್ಗೆ ನಿತೀಶ್ ಕುಮಾರ್‌ರನ್ನು ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದರು.





