ಕಿವೀಸ್ ಮುಡಿಗೆ ಚಾಪೆಲ್-ಹ್ಯಾಡ್ಲಿ ಟ್ರೋಫಿ
ಟೇಲರ್ ಆಕರ್ಷಕ ಶತಕ, ಬೌಲ್ಟ್ಗೆ ಆರು ವಿಕೆಟ್

ಹ್ಯಾಮಿಲ್ಟನ್, ಫೆ.5: ಟ್ರೆಂಟ್ ಬೌಲ್ಟ್ ಕಬಳಿಸಿದ ಆರು ವಿಕೆಟ್ ಗೊಂಚಲು ಹಾಗೂ ರಾಸ್ ಟೇಲರ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 24 ರನ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.
ಕಿವೀಸ್ ಈ ಗೆಲುವಿನ ಮೂಲಕ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಪ್ರತಿಷ್ಠಿತ ಚಾಪೆಲ್-ಹ್ಯಾಡ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮುಖಭಂಗ ಕ್ಕೀಡಾಗಿರುವ ಆಸ್ಟ್ರೇಲಿಯ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದೆ.
ನ್ಯೂಝಿಲೆಂಡ್ ತಂಡ ಮೊದಲ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಎರಡನೆ ಪಂದ್ಯ ಮಳೆಗಾಹುತಿಯಾಗಿತ್ತು.
ರ್ಯಾಂಕಿಂಗ್‌ನಲ್ಲಿ 118ನೆ ಅಂಕಕ್ಕೆ ಕುಸಿದಿರುವ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕ ದೊಂದಿಗೆ ಸಮಬಲ ಸಾಧಿಸಿದೆ. ಆಫ್ರಿಕ ತಂಡ ಶನಿವಾರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿತ್ತು.
ದಕ್ಷಿಣ ಆಫ್ರಿಕ ತಂಡ ಲಂಕಾ ವಿರುದ್ಧ ಏಕದಿನ ಸರಣಿಯ ಉಳಿದೆರಡು ಪಂದ್ಯಗಳನ್ನು ಗೆದ್ದುಕೊಂಡರೆ ಆಸ್ಟ್ರೇಲಿಯದಿಂದ ನಂ.1 ಸ್ಥಾನ ವಶಪಡಿಸಿಕೊಳ್ಳಲಿದೆ.
ಟಾಸ್ ಜಯಿಸಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಟೇಲರ್ ಸಿಡಿಸಿದ 16ನೆ ಶತಕದ ನೆರವಿನಿಂದ(107 ರನ್, 101 ಎಸೆತ) ನ್ಯೂಝಿಲೆಂಡ್ 9 ವಿಕೆಟ್‌ಗಳ ನಷ್ಟಕ್ಕೆ 281 ರನ್ ಗಳಿಸಿತು. ಟೇಲರ್ ಅವರು ಡಿಯನ್ ಬೌನ್ಲಿ(63) ಅವರೊಂದಿಗೆ ಶತಕದ ಜೊತೆಯಾಟ ನಡೆಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
ಗೆಲ್ಲಲು 282 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯಕ್ಕೆ ಆ್ಯರೊನ್ ಫಿಂಚ್ ಹಾಗೂ ಶಾನ್ ಮಾರ್ಷ್ ಉತ್ತಮ ಆರಂಭವನ್ನು ನೀಡಿದ್ದರು. ಈ ಜೋಡಿ ಪ್ರತಿ ಓವರ್‌ಗೆ ಆರು ರನ್ ಗಳಿಸಿತು. ಟಿಮ್ ಸೌಥಿ ಮೇಲೆ ಎರಗಿದ ಈ ಜೋಡಿ ಅವರು ಎಸೆದಿದ್ದ ಮೊದಲ ನಾಲ್ಕು ಓವರ್ ಸ್ಪೆಲ್‌ನಲ್ಲಿ 30 ರನ್ ಕಬಳಿಸಿತು.
ಮಾರ್ಷ್ 22 ರನ್ ಗಳಿಸಿ ರನೌಟಾದರು. ಪೀಟರ್ ಹ್ಯಾಂಡ್ಸ್‌ಕಾಂಬ್ ಅವರು ಬೌಲ್ಟ್ ಅವರು ಮೊದಲ ಎಸೆತದಲ್ಲೇ ಔಟಾದರು. 3ನೆ ವಿಕೆಟ್‌ಗೆ 75 ರನ್ ಜೊತೆಯಾಟ ನಡೆಸಿದ ಫಿಂಚ್ ಹಾಗೂ ಟ್ರೆವಿಸ್ ಹೆಡ್ ತಂಡವನ್ನು ಆಧರಿಸಿದರು. ಫಿಂಚ್(56) ವಿಕೆಟ್ ಕಬಳಿಸಿದ ಬೌಲ್ಟ್ ಈ ಜೋಡಿಯನ್ನು ಬೇರ್ಪಡಿಸಿದರು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾದರು. ಆಗ ಆಸ್ಟ್ರೇಲಿಯದ ಸ್ಕೋರ್ 4 ವಿಕೆಟ್‌ಗೆ 120.
ಹೆಡ್ ಹಾಗೂ ಮಾರ್ಕಸ್ ಸ್ಟೊನಿಸ್ 53 ರನ್ ಜೊತೆಯಾಟ ನಡೆಸಿ ರನ್ ಚೇಸಿಂಗ್‌ಗೆ ಬಲ ನೀಡಿದರು. ಆದರೆ, ಎರಡನೆ ಸ್ಪೆಲ್ ಎಸೆಯಲು ಬಂದ ಬೌಲ್ಟ್ ಅವರು ಹೆಡ್(53) ಹಾಗೂ ಜೇಮ್ಸ್ ಫಾಕ್ನರ್(0) ವಿಕೆಟ್ ಪಡೆದು ಆಸೀಸ್‌ಗೆ ಮತ್ತೊಮ್ಮೆ ಆಘಾತ ನೀಡಿದರು.
ಸ್ಟೋನಿಸ್ 42 ರನ್‌ಗೆ ಔಟಾದಾಗ ಆಸ್ಟ್ರೇಲಿಯ 198 ರನ್‌ಗೆ 7ನೆ ವಿಕೆಟ್ ಕಳೆದುಕೊಂಡಿತು. ಅಂತಿಮ 10 ಓವರ್‌ಗಳಲ್ಲಿ 8.30ರ ರನ್‌ರೇಟ್‌ನಲ್ಲಿ ರನ್ ಗಳಿಸಬೇಕಾಗಿತ್ತು.
ಮಿಚೆಲ್ ಸ್ಟಾರ್ಕ್(ಅಜೇಯ 29) ಹಾಗೂ ಪ್ಯಾಟ್ ಕುಮ್ಮಿನ್ಸ್(27) ಆಸ್ಟ್ರೇಲಿಯವನ್ನು ಗೆಲುವಿನ ಸನಿಹ ಕೊಂಡೊಯ್ದರು. ಆದರೆ, ಮತ್ತೊಮ್ಮೆ ಕಾಂಗರೂ ಪಡೆಯನ್ನು ಕಾಡಿದ ಬೌಲ್ಟ್ ಅಂತಿಮ 2 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿ 33 ರನ್‌ಗೆ ಒಟ್ಟು 6 ವಿಕೆಟ್ ಉಡಾಯಿಸಿ ಕಿವೀಸ್‌ಗೆ ರೋಚಕ ಗೆಲುವು ತಂದರು.
ಆಸ್ಟ್ಲೇ ದಾಖಲೆ ಸರಿಗಟ್ಟಿದ ಟೇಲರ್: ನ್ಯೂಝಿಲೆಂಡ್ ಇನಿಂಗ್ಸ್ ಬೆಳೆಯಲು ಪ್ರಮುಖ ಪಾತ್ರವಹಿಸಿದ್ದ ಟೇಲರ್ 16ನೆ ಶತಕ ಬಾರಿಸಿ ತಮ್ಮದೇ ದೇಶದ ನಥನ್ ಆಸ್ಟ್ಲೇ ದಾಖಲೆ ಮುರಿದರು.
ನ್ಯೂಝಿಲೆಂಡ್ 76 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಇಳಿದಿದ್ದ ಟೇಲರ್ ಅವರು ಬ್ರೌನ್ಲೀ ಅವರೊಂದಿಗೆ ಇನಿಂಗ್ಸ್ ಬೆಳೆಸಿದರು. 3ನೆ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದ ಟೇಲರ್-ಬ್ರೌನ್ಲಿ ತಂಡದ ಮೊತ್ತವನ್ನು 300ರ ಗಡಿ ದಾಟಿಸುವ ವಿಶ್ವಾಸ ಮೂಡಿಸಿದ್ದರು. ಬೌನ್ಲಿ 63 ರನ್ ಗಳಿಸಿ ಔಟಾದ ಬೆನ್ನಿಗೆ ಕಿವೀಸ್‌ನ ಮಧ್ಯಮ ಕ್ರಮಾಂಕದ ಕುಸಿಯಿತು.
33 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳು ಉರುಳಿದವು. ಆಸ್ಟ್ರೇಲಿಯದ ಆಲ್‌ರೌಂಡರ್ ಫಾಕ್ನರ್(3-59) ಟೇಲರ್ ಹಾಗೂ ಬ್ರೌನ್ಲೀ ಸಹಿತ ಮೂರು ವಿಕೆಟ್ ಪಡೆದರು.







