ಸುಚಿತ್ರಾ ಹೊಳ್ಳರಿಗೆ ‘ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ

ಉಡುಪಿ. ಫೆ.5: ಉಡುಪಿ ರಾಗಧನ ಸಂಸ್ಥೆ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಎರಡನೆ ದಿನವಾದ ಶನಿವಾರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಪುತ್ತೂಪಿನ ಸುಚಿತ್ರಾ ಹೊಳ್ಳರಿಗೆ ‘ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಹಿರಿಯ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯ ಪ್ರಾಯೋಜಿಸಿರುವ ಪ್ರಶಸ್ತಿಯನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಎಸ್.ಆರ್. ಪ್ರದಾನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ರಾಗಧನ ಅಧ್ಯಕ್ಷ ಎ.ಈಶ್ವರಯ್ಯ ಮಾತನಾಡಿ, 50-60 ವರ್ಷಗಳ ಹಿಂದೆ ಹೆಣ್ಮಕ್ಕಳು ಕೇವಲ ದೇವರನಾಮ ಹಾಡಲು ಸೀಮಿತವಾಗಿದ್ದರು. ಅವರಿಂದ ಪಲ್ಲವಿ ಹಾಡಲು ಸಾಧ್ಯವಿಲ್ಲ ಎಂಬ ಭಾವನೆ ಇತ್ತು. ಆದರೆ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಮಹಿಳಾ ಗಾಯಕಿಯರು ಸಾಧಿಸಿ ತೋರಿಸಿದ್ದಾರೆ ಎಂದರು.
ಡಾ.ಯು.ಪಿ.ಉಪಾಧ್ಯಾಯ, ರಾಗಧನದ ಕಾರ್ಯದರ್ಶಿ ಉಮಾಶಂಕರಿ ಉಪಸ್ಥಿತರಿದ್ದರು. ಬಳಿಕ ಸುಚಿತ್ರಾ ಹೊಳ್ಳರಿಂದ ಸಂಗೀತ ಕಚೇರಿ ನಡೆಯಿತು.





