ಕರ್ನಾಟಕ ಹೈಕೋರ್ಟ್ ನ ನ್ಯಾ. ಅಬ್ದುಲ್ ನಝೀರ್ ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ
ಮೂಡಬಿದ್ರೆಯ ಕಾನದಿಂದ ದಿಲ್ಲಿಗೆ

ಹೊಸದಿಲ್ಲಿ, ಫೆ.6: ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಲು ಹೈಕೋರ್ಟ್‌ನ ನಾಲ್ವರು ಮುಖ್ಯ ನ್ಯಾಯಾಧೀಶರು ಮತ್ತು ಓರ್ವ ನ್ಯಾಯಾಧೀಶರು ಸೇರಿದಂತೆ ಐವರ ಹೆಸರನ್ನು ಸುಪ್ರೀಂಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಜೆ.ಎಸ್.ಖೇಹರ್ ಅವರನ್ನೊಳಗೊಂಡ ಸಮಿತಿಯು ಶಿಫಾರಸು ಮಾಡಿದೆ.
ರಾಜಸ್ತಾನ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ನವೀನ್ ಸಿನ್ಹಾ, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಸಂಜಯ್ ಕಿಷನ್ ಕೌಲ್, ಛತ್ತೀಸ್‌ಗಢ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಗುಪ್ತಾ, ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಮೋಹನ್ ಎಂ.ಶಾಂತನಗೌಡರ್ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಎಸ್.ಅಬ್ದುಲ್ ನಝೀರ್ ಅವರ ಹೆಸರನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.
ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿಲ್ಲದವರ ಹೆಸರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡುವ ಕ್ರಮ ಅಪರೂಪದ್ದಾಗಿದೆ. 1998ರಲ್ಲಿ ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಆರ್.ಸಿ.ಲಹೋಟಿ ಅವರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಒಟ್ಟು 31 ನ್ಯಾಯಾಧೀಶರು ಇರಬೇಕಿದ್ದು ಪ್ರಸ್ತುತ 23 ನ್ಯಾಯಾಧೀಶರಿದ್ದಾರೆ. ಅಬ್ದುಲ್ ನಝೀರ್ ಅವರು ನ್ಯಾಯಾಧೀಶರಾಗಿ ಆಯ್ಕೆಯಾದರೆ ಸುಪ್ರೀಂಕೋರ್ಟ್‌ನ ಏಕೈಕ ಮುಸ್ಲಿಂ ನ್ಯಾಯಮೂರ್ತಿಗಳಾಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಕಾನದವರಾದ ನ್ಯಾ. ನಝೀರ್ ಅವರು ಮಂಗಳೂರಿನ ಎಸ್ ಡಿ ಎಂ ಕಾನೂನು ವಿದ್ಯಾಲಯದಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ವಕೀಲರಾಗಿ ಕಾನೂನು ಸೇವೆ ಪ್ರಾರಂಭಿಸಿದರು. ಇದೀಗ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಈ ಹಿಂದಿನ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕುರ್ ಅವರ ನೇತೃತ್ವದ ಸಮಿತಿಯು ಶಿಫಾರಸು ಮಾಡಿದ್ದ ಹಲವು ಹೆಸರನ್ನು ತಿರಸ್ಕರಿಸಲಾಗಿತ್ತು .







