ಹಲ್ಲುಜ್ಜದ ಮಗಳನ್ನು ತುಳಿದು ಕೊಂದ ಕ್ರೂರಿ ತಾಯಿ

ವಾಷಿಂಗ್ಟನ್, ಫೆ.6: ಹಲ್ಲು ಉಜ್ಜದಿರುವುದಕ್ಕಾಗಿ ಅಮ್ಮನೇ ತನ್ನ ನಾಲ್ಕು ವರ್ಷದ ಪುತ್ರಿಯನ್ನು ತುಳಿದು ಕೊಂದು ಹಾಕಿದ ಘಟನೆ ಅಮೆರಿಕದ ಮೆರಿಲೆಂಡ್‌ನ ಗ್ರೇಟರ್ಸ್‌ಬರ್ಗ್‌ನಲ್ಲಿ ನಡೆದಿದೆ.
ಹೆರಿಸ್ ಅರ್ನಾಲ್ಡ್ಸ್ ರಿವಾಸ್ ಎನ್ನುವ ಇಪ್ಪತ್ತು ವರ್ಷದ ಮಹಿಳೆ ತನ್ನ ಪುತ್ರಿ ನೊಹೇಲಿ ಅಲೆಕ್ಸಾಂಡ್ರಿಯಳನ್ನು ಒದ್ದು ಕೊಂದಿರುವ ಆರೋಪಿ. ಮಗಳು ಬಾತ್‌ಟಬ್‌ನಲ್ಲಿ ಚಲನೆಯಿಲ್ಲದೆ ಬಿದ್ದಿದ್ದನ್ನು ನೋಡಿ ಈಕೆಯೇ ಪೊಲೀಸರಿಗೆ ತಿಳಿಸಿದ್ದಾಳೆ. ಸ್ನಾನಕ್ಕೆ ಹೋದ ಮಗುವು ಹದಿನೈದು ನಿಮಿಷ ಕಳೆದರೂ ಬರಲಿಲ್ಲ. ಆಗ ತಾನು ಹೋಗಿ ನೋಡಿದೆ. ಮಗುವು ಬಾತ್‌ಟಬ್‌ಗೆ ಬೋರಲಾಗಿ ಬಿದ್ದಿರುವುದನ್ನುಕಂಡೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಬಳಿಕ ಸಮೀಪದ ಆಸ್ಪತ್ರೆಗೆ ಮಗುವನ್ನು ಸೇರಿಸಲಾಗಿತ್ತು. ಮಗುವಿನ ದೇಹದಲ್ಲಿ ಅನೇಕ ಗಾಯಗಳಿದ್ದವು. ತಲೆಗೆ ಏಟು ಬಿದ್ದಿತ್ತು.ಆದ್ದರಿಂದ ಮಗುವನ್ನು ವಾಷಿಂಗ್ಟನ್‌ನ ನ್ಯಾಶನಲ್ ಮೆಡಿಕಲ್ ಸೆಂಟರ್ ಕರೆತರಲಾಗಿತ್ತು. ಆದರೆ ಮಗು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದೆ. ನಂತರ ತಾಯಿಯನ್ನು ವಿಚಾರಿಸಿದಾಗ ಹಲ್ಲುಜ್ಜದ್ದಕ್ಕೆ ತಾನು ಮಗುವಿನ ಹೊಟ್ಟೆಗೆ ಒದೆದಿದ್ದೆ ಎಂದು ಆಕೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ತುಳಿದ ರಭಸಕ್ಕೆ ಮಗು ಗೋಡೆಗೆ ಬಡಿದು ಕೆಳಗುರುಳಿ ಬಿದ್ದಿತ್ತು ಎಂದು ಘಟನೆಯ ನಿಜಸ್ಥಿತಿಯನ್ನು ಆ ಕ್ರೂರಿ ತಾಯಿ ಬಹಿರಂಗಪಡಿಸಿದ್ದಾಳೆ. ಕೆಲವು ದಿವಸಗಳ ಹಿಂದೆ ಬೆಲ್ಟ್‌ನಿಂದ ಮಗುವಿಗೆ ಹೊಡೆದದ್ದನ್ನೂ ಆಕೆ ಒಪ್ಪಿಕೊಂಡಿದ್ದಾಳೆಂದು ವರದಿ ತಿಳಿಸಿದೆ.





