ಅಂಪೈರ್ ಮುಖಕ್ಕೆ ಚೆಂಡಿನಿಂದ ಹಲ್ಲೆ
ಡೇವಿಸ್‌ಕಪ್ ಆಟಗಾರ ಪಂದ್ಯದಿಂದ ಅಮಾನತು

ಒಟ್ಟಾವಾ, ಫೆ.6: ಪ್ರತಿಷ್ಠಿತ ಡೇವಿಸ್ ಕಪ್‌ನಲ್ಲಿ ನಡೆದ ವಿಲಕ್ಷಣ ಘಟನೆಯೊಂದು ವಿಶ್ವದಾದ್ಯಂತವಿರುವ ಟೆನಿಸ್ ಅಭಿಮಾನಿಗಳನ್ನು ಆಘಾತಗೊಳಿಸಿದೆ.
ಕೆನಡಾದ ಉದಯೋನ್ಮುಖ ಆಟಗಾರ ಡೆನಿಸ್ ಶಪೊವಲೊವ್ ಫ್ರಾನ್ಸ್‌ನ ಚೇರ್ ಅಂಪೈರ್ ಅರ್ನೌಡ್ ಗಬಾಸ್ ಮುಖಕ್ಕೆ ಪ್ರಮಾದವಶಾತ್ ಚೆಂಡಿನಿಂದ ಹೊಡೆದ ಕಾರಣದಿಂದ ಈ ಆಟಗಾರನನ್ನು ಡೇವಿಸ್‌ಕಪ್‌ನಲ್ಲಿ ಆಡುವುದರಿಂದ ಅನರ್ಹಗೊಳಿಸಲಾಗಿದೆ. ಬ್ರಿಟನ್-ಕೆನಡಾ ನಡುವಿನ ಡೇವಿಸ್‌ಕಪ್ ಪಂದ್ಯದ ವೇಳೆ ಈ ಅಹಿತಕರ ಘಟನೆ ನಡೆದಿದ್ದು, 17ರ ಹರೆಯದ ಕೆನಡಾ ಆಟಗಾರ ಡೆನಿಸ್ ಶಪೊವಲೊವ್ ಐದನೆ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಬ್ರಿಟನ್ ಆಟಗಾರ ಕೈಲ್ ಎಡ್ಮಂಡ್ ವಿರುದ್ಧ ಮೊದಲೆರಡು ಸೆಟ್‌ಗಳಲ್ಲಿ ಸೋತರು.
ಡೆನಿಸ್ ಮೂರನೆ ಸೆಟ್‌ನಲ್ಲಿ ಅಂಕವನ್ನು ಕಳೆದುಕೊಂಡ ಹತಾಶೆಯಲ್ಲಿ ಪ್ರೇಕ್ಷಕರತ್ತ ಚೆಂಡನ್ನು ಬಾರಿಸಿದರು. ಆದರೆ, ಆ ಚೆಂಡು ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಅಂಪೈರ್ ಮುಖಕ್ಕೆ ಅಪ್ಪಳಿಸಿತು. ಆಗ ಅವರು ನೋವನ್ನು ತಾಳಲಾರದೆ ಮುಖವನ್ನು ಮುಚ್ಚಿಕೊಂಡರು. ಅಂಪೈರ್ ಬಲಗಣ್ಣಿಗೆ ಏಟು ತಗಲಿದೆ.
ಈ ಆಕಸ್ಮಿಕ ಘಟನೆ ನಡೆದಾಗ ಸ್ಟೇಡಿಯಂನಲ್ಲಿ ನೆರೆದಿದ್ದ ಟೆನಿಸ್ ಅಭಿಮಾನಿಗಳು ಹಾಗೂ ಆಟಗಾರರು ಒಂದು ಕ್ಷಣ ಆಘಾತಗೊಂಡರು. ತಕ್ಷಣವೇ ಅಂಪೈರ್‌ರತ್ತ ಧಾವಿಸಿದ ಡೆನಿಸ್, ಅಂಪೈರ್‌ರನ್ನು ಸಮಾಧಾನಪಡಿಸಲು ಯತ್ನಿಸಿದರು. ಕೆನಡಾದ ಆಟಗಾರರು ಐಸ್-ಪ್ಯಾಕ್‌ನ್ನು ಅಂಪೈರ್ ಮುಖಕ್ಕೆ ಇಟ್ಟರು. ಯುವ ಆಟಗಾರ ಡೆನಿಸ್ ತನ್ನ ತಪ್ಪಿನ ಅರಿವಾಗಿ ಕಣ್ಣೀರಿಟ್ಟರು. ಅಂಪೈರ್‌ನ್ನು ಚಿಕಿತ್ಸೆಗಾಗಿ ಒಟ್ಟಾವಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೀಮ್ ಕೆನಡಾದ ವಿರುದ್ಧ ಮೇಲುಗೈ ಸಾಧಿಸಿರುವ ಬ್ರಿಟನ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು, ಫ್ರಾನ್ಸ್ ತಂಡವನ್ನು ಎದುರಿಸಲಿದೆ.







