ಮಹಿಳಾ ಮಾನಸಿಕ ರೋಗಿಗಳ ಆಶ್ರಯ ಕೇಂದ್ರದಲ್ಲಿ 2 ತಿಂಗಳಲ್ಲಿ 11 ಮಕ್ಕಳ ಸಾವು !
.jpg)
ಹೊಸದಿಲ್ಲಿ,ಫೆ.6: ದಿಲ್ಲಿ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಮಾನಸಿಕ ರೋಗಿಗಳ ಆಶ್ರಯ ಕೇಂದ್ರ ‘ಆಶಾ ಕಿರಣ’ದಲ್ಲಿ ಎರಡು ತಿಂಗಳಲ್ಲಿ ಹನ್ನೊಂದು ಮಕ್ಕಳು ಮೃಪಟ್ಟಿದ್ದಾರೆ. ದಿಲ್ಲಿ ಮಹಿಳಾ ಆಯೋಗ ನಡೆಸಿದ ತಪಾಸಣೆ ವೇಳೆ ಈ ಆತಂಕಕಾರಿ ವಿವರಗಳು ಬಹಿರಂಗವಾಗಿವೆ. ರೋಹಿಣಿಯಲ್ಲಿ ಆಶಾಕಿರಣವಿದ್ದು ಈ ಸಂಸ್ಥೆಯ ರೋಗಿಗಳ ದಯನೀಯ ಸ್ಥಿತಿಯನ್ನು ತಿಳಿಯಲಿಕ್ಕಾಗಿ ಆಯೋಗದತಂಡ ರಾತ್ರಿ ವೇಳೆ ಅಲ್ಲಿಗೆ ಭೇಟಿ ನೀಡಿ ತಪಾಸಣೆ ನಡೆಸಿತ್ತು.
ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ನೇತೃತ್ವದ ತಂಡದ ತಪಾಸಣೆಯವೇಳೆ ಈ ಕೇಂದ್ರದಲ್ಲಿ ನಡೆಯುತ್ತಿರುವ ಕಟು ಮಾನವಹಕ್ಕು ಉಲ್ಲಂಘನೆಗಳನ್ನು ಆಯೋಗ ಪತ್ತೆಮಾಡಿದೆ. ಸಂಸ್ಥೆಯ ಕೆಟ್ಟ ಪರಿಸ್ಥಿತಿಯೇ ಹನ್ನೊಂದು ಮಕ್ಕಳು ಮೃತಪಡಲು ಕಾರಣ ಎಂದು ತಿಳಿದು ಬಂದಿದೆ. ಸಂಸ್ಥೆಯ ಕಟ್ಟಡದಲ್ಲಿ ಉಳಿದುಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚು ರೋಗಿಗಳನ್ನುಇರಿಸಲಾಗಿದೆ. ಜೊತೆಗೆ ಶುಚಿತ್ವದ ಕೊರತೆ ಇದೆ. 350 ಮಂದಿ ವಾಸಿಸಬೇಕಿದ್ದ ಸ್ಥಳದಲ್ಲಿ 450 ಮಂದಿ ವಾಸವಿದ್ದಾರೆ. ಇಷ್ಟು ರೋಗಿಗಳಿಗೆ ಒಬ್ಬನೇ ಮಾನಸಿಕ ತಜ್ಞರು ಇದ್ದಾರೆ. ಮಹಿಳಾರೋಗಿಗಳಿರುವ ಕೇಂದ್ರದಲ್ಲಿ ಕಾವಲುಗಾರರಿಲ್ಲ. ಸರಿಯಾದ ಭದ್ರತಾ ವ್ಯವಸ್ಥೆಯಿಲ್ಲ. ಕೇಂದ್ರದಲ್ಲಿ ಸ್ಥಾಪಿಸಿರುವ ಸಿಸಿಟಿವಿಯನ್ನು ಪುರುಷ ನೌಕರರು ನಿರ್ವಹಿಸುತ್ತಿದ್ದಾರೆ. ಇಂತಹ ಹಲವಾರು ಲೋಪಗಳನ್ನು ಮಹಿಳಾ ಆಯೋಗ ಪತ್ತೆಹಚ್ಚಿದೆ ಎಂದು ವರದಿತಿಳಿಸಿದೆ.





