ತಾನೇ ರಕ್ಷಿಸಿದ ನಾಗರ ಹಾವಿನ ತಲೆಗೆ ಆತ ಮುತ್ತಿಟ್ಟ ಬಳಿಕ ಏನಾಯಿತು ನೋಡಿ

ಮುಂಬೈ, ಫೆ. 6 : ಹಾವು ಹಿಡಿಯುವ ಪರಿಣತ ಸೋಮನಾಥ ಮಾತ್ರೆ ಎಂಬವರು ಅಪಾಯಕಾರಿ ನಾಗರ ಹಾವನ್ನು ಬಚಾವ್ ಮಾಡಿ ಬಳಿಕ ಅದಕ್ಕೆ ತಾವೇ ಬಲಿಯಾಗಿದ್ದಾರೆ. ಕಾರೊಂದರಲ್ಲಿ ಸಿಲುಕಿಕೊಂಡಿದ್ದ ನಾಗರ ಹಾವನ್ನು ಸೋಮನಾಥ ರಕ್ಷಿಸಿದರು. ಅಷ್ಟೇ ಆಗಿದ್ದರೆ ಪ್ರಕರಣ ಸುಖಾಂತ್ಯವಾಗುತ್ತಿತ್ತು. ಆದರೆ ಹಾಗಾಗಲಿಲ್ಲ.
ತಾನು ರಕ್ಷಿಸಿದ ನಾಗರ ಹಾವನ್ನು ಹಿಡಿದುಕೊಂಡ ಸೋಮನಾಥ್ ಫೋಟೋಗೆ ಪೋಸ್ ನೀಡಿದರು. ಆಗ ಹಾವಿನ ತಲೆಗೆ ಅವರು ಮುತ್ತಿಕ್ಕಿದರು. ಆದರೆ ಹಾವು ವಾಪಸ್ ಅವರಿಗೇ ಮುತ್ತನ್ನು ಮರಳಿಸಿಬಿಟ್ಟಿತು ! ಅಂದರೆ ಕಚ್ಚಿಬಿಟ್ಟಿತು. ಅದೂ ಅವರ ಎದೆಗೆ ! ಇದರಿಂದ ಸೋಮನಾಥ್ ಮೃತಪಟ್ಟಿದ್ದಾರೆ.
ಕಳೆದ 12 ವರ್ಷಗಳಲ್ಲಿ ಈ ರೀತಿ ಹಾವಿನೊಂದಿಗೆ ಸ್ಟಂಟ್ ಮಾಡಿ ಮೃತಪಟ್ಟ 31ನೇ ವ್ಯಕ್ತಿ ಸೋಮನಾಥ್ ಎಂದು ಹೇಳಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕಾನೂನು ತರಬೇಕು. ಹಾಗು ಈ ರೀತಿ ಹಾವಿನೊಂದಿಗೆ ಸ್ಟಂಟ್ ಮಾಡುವವರು ಹಾಗು ಅವರ ಫೋಟೋಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಸೋಮನಾಥ್ ನವಿ ಮುಂಬೈಯ ಬೇಲಾಪುರ್ ನಿವಾಸಿ. ಸ್ನೇಹಿತರ ಮೂಲಕ ವಿಷಯ ತಿಳಿದು ಹಾವನ್ನು ರಕ್ಷಿಸಲು ತೆರಳಿದ್ದರು. ಬಚಾವ್ ಮಾಡಿದ ಹಾವನ್ನು ಇನ್ನೊಂದು ಕಡೆಗೆ ತೆಗೆದುಕೊಂಡು ಹೊಸ ಸೋಮನಾಥ್ ಅಲ್ಲಿ ದುಸ್ಸಾಹಸಕ್ಕೆ ಇಳಿದು ಜೀವ ಕಳೆದುಕೊಂಡಿದ್ದಾರೆ. ಹಾವು ಕಡಿದ ಬಳಿಕ ಅವರು ಐದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರನ್ನು ಬದುಕಿಸಲಾಗಲಿಲ್ಲ.
ವಿಪರ್ಯಾಸವೆಂದರೆ, ಸೋಮನಾಥ್ ಈವರೆಗೆ 100 ಕ್ಕೂ ಹೆಚ್ಚು ವಿಷಕಾರಿ ಹಾವುಗಳನ್ನು ರಕ್ಷಿಸಿದ್ದಾರೆ. ಸೋಮನಾಥ್ ರಂತೆ ಹಾವಿನೊಂದಿಗೆ ಸರಸವಾಡಲು ಹೋಗಿ ಪ್ರಾಣ ಕಳಕೊಂಡವರ ಬಗ್ಗೆ ವನ್ಯಜೀವಿ ಫೋಟೋಗ್ರಾಫರ್ ಕೇದಾರ್ ಭಿಡೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಂತಹ ದುರಂತಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಿಡೆ ಹೇಳಿದ್ದಾರೆ.







