ಆರೆಸ್ಸೆಸ್‌ನ ಸಂಚುಗಳಿಗೆ ಜೈಲಾಧಿಕಾರಿಗಳು ಮಣಿಯುತ್ತಿದ್ದಾರೆ: ವಿ.ಎಸ್. ಅಚ್ಯುತಾನಂದನ್
.jpg)
ತಿರುವನಂತಪುರಂ,ಫೆ.6: ಕಾಸರಗೋಡಿನ ತೆರೆದ ಜೈಲಿನಲ್ಲಿ(ಓಪನ್ ಜೈಲ್) ಗೋಮಾತಾ ಪೂಜೆ ಮಾಡಿ ಅಂಧವಿಶ್ವಾಸ ಪ್ರಚಾರ ಮಾಡಿದವರೊಂದಿಗೆ ಕೈ ಜೋಡಿಸಿರುವ ಜೈಲು ಸುಪರಿಂಟೆಂಡೆಂಟ್ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿ.ಎಸ್. ಅಚ್ಯುತಾನಂದನ್ ಆಗ್ರಹಿಸಿದ್ದಾರೆ.
ನಕಲಿ ಸನ್ಯಾಸಿ ಎಂದು ಆರೋಪಕ್ಕೆ ಗುರಿಯಾದ ಓರ್ವರ ನೇತೃತ್ವದಲ್ಲಿ ಆರೆಸ್ಸೆಸಿಗರಾದ ಕೈದಿಗಳು ಸೇರಿ ಜೈಲಿನಲ್ಲಿ ಇಂತಹದೊಂದು ಪೂಜೆ ನಡೆಸಿರುವ ದೃಶ್ಯಗಳು ಮತ್ತು ವಿವರಗಳು ಬಹಿರಂಗೊಂಡಿವೆ. ಅಂಧವಿಶ್ವಾಸ ಮತ್ತು ಅನಾಚಾರಗಳ ವಿರುದ್ಧ ರಾಜಿಯಿಲ್ಲದ ಹೋರಾಟ ನಡೆಸುವ ಮೂಲಕ ಕೇರಳ ಮುನ್ನಡೆದು ಈಗ ವಜ್ರಮಹೋತ್ಸವಕ್ಕೆ ತಲುಪಿದೆ. ಇಂತಹದೊಂದು ಸಂದರ್ಭದಲ್ಲಿ ಅನಾಚಾರಗಳು ಮತ್ತು ಅಂಧವಿಶ್ವಾಸಗಳು ಬೆಳೆಸುವ ಪ್ರಯತ್ನಗಳಾಗಿರುವುದು ಅತ್ಯಂತ ಖಂಡನೀಯ ಎಂದು ವಿ.ಎಸ್. ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಜೈಲು ಮುಖ್ಯಸ್ಥರು ಇದಕ್ಕೆ ಕೈಜೋಡಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಜೈಲುಗಳನ್ನು ಕೂಡಾ ಆರೆಸ್ಸೆಸ್ ಕೇಸರೀಕರಣಗೊಳಿಸುವ ಸಂಚು ನಡೆಸುತ್ತಿದೆ. ಇದಕ್ಕೆ ಜೈಲಧಿಕಾರಿಗಳು ಮಣಿಯುತ್ತಿರುವುದರಿಂದ ಪ್ರಸ್ತುತ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿಇಂತಹ ಅಸಂಬದ್ಧ ಕ್ರಮಗಳಿಗೆ ನೆರವಾದ ಜೈಲು ಸುಪರಿಟೆಂಡೆಂಟ್ ಮತ್ತು ಇತರ ಅಧಿಕಾರಿಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ವಿ.ಎಸ್. ಆಗ್ರಹಿಸಿದ್ದಾರೆ.





