ಕೇಂದ್ರ ಸರಕಾರದಿಂದ ದೇಶದ ವೈವಿಧ್ಯತೆಗೆ ಅಪಾಯ: ಆ್ಯಂಟನಿ

ತಿರುವನಂತಪುರಂ, ಫೆ.6: ಭಾರತದ ಶಕ್ತಿ ವೈವಿಧ್ಯತೆಯಲ್ಲಿ ಅಡಗಿದ್ದು, ಇದು ಪ್ರಸ್ತುತ ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್‌ಡಿಎ ಸರಕಾರದಿಂದ ಆಕ್ರಮಣಕ್ಕೆ ಒಳಗಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ಆ್ಯಂಟನಿ ಹೇಳಿದ್ದಾರೆ.
ಕೇಂದ್ರ ಸರಕಾರ ಹಾಗೂ ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರಕಾರದ ವಿರುದ್ಧ ಸರಣಿ ಪ್ರತಿಭಟನೆಯ ಅಭಿಯಾನದ ಪ್ರಯುಕ್ತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟ ಹಮ್ಮಿಕೊಂಡಿರುವ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ವೈವಿಧ್ಯತೆಯಲ್ಲಿ ಏಕತೆ ಎಂಬ ದೇಶದ ವೈಶಿಷ್ಟವನ್ನು ರಕ್ಷಿಸಿಕೊಳ್ಳಲು ಅಗ್ರ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದರು.
ಬಿಜೆಪಿ ಮತ್ತು ಆರೆಸ್ಸೆಸ್ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ ಪರಸ್ಪರ ಎತ್ತಿಕಟ್ಟುತ್ತಿದ್ದಾರೆ. ದೇಶದ ಅಖಂಡತ್ವಕ್ಕೆ ಹಾನಿ ಎಸಗಲು ಶತ್ರು ರಾಷ್ಟ್ರಗಳಿಂದ ಆಗದು. ಆದರೆ ವೈವಿಧ್ಯತೆಯಲ್ಲಿ ಏಕತೆ ಎಂಬ ದೇಶದ ಹೆಮ್ಮೆ ಮತ್ತು ವೈಶಿಷ್ಟತೆಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ರಕ್ಷಿಸಬೇಕಿದೆ ಎಂದವರು ನುಡಿದರು.
ಉತ್ತರಪ್ರದೇಶ ಚುನಾವಣೆ ಬಳಿಕ ಕೇಂದ್ರ ಸರಕಾರ ತ್ರಿವಳಿ ತಲಾಖ್ ಪದ್ದತಿಗೆ ನಿಷೇಧ ಹೇರುವ ಸಾಧ್ಯತೆಯಿದೆ ಎಂಬ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಹೇಳಿಕೆಯನ್ನು ಟೀಕಿಸಿದ ಆ್ಯಂಟನಿ, ಚುನಾವಣೆ ಸಂದರ್ಭ ಬಿಜೆಪಿ ನಾಯಕರು ಕೋಮುವಾರು ಧ್ರುವೀಕರಣಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುತ್ತಾರೆ ಎಂದರು.
ನೋಟು ಅಮಾನ್ಯ ನಿರ್ಧಾರವನ್ನು ಟೀಕಿಸಿದ ಅವರು, ಕೇಂದ್ರ ಸರಕಾರದ ‘ತುಘಲಕ್ ದರ್ಬಾರ್’ನಿಂದ ತೊಂದರೆಗೊಳಗಾದ ಜನರಿಗೆ ಪರಿಹಾರವನ್ನಾದರೂ ಸರಕಾರ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್‌ಡಿಎಫ್ ಸರಕಾರದ ದುರಾಡಳಿತದ ಕಾರಣ ಆಡಳಿತಯಂತ್ರ ಸ್ಥಗಿತಗೊಂಡಿದೆ. ಸದಾ ಆತಂಕದ ಸ್ಥಿತಿ ಇರಬೇಕೆಂದು ಸಿಪಿಐ(ಎಂ) ಮತ್ತು ಬಿಜೆಪಿ ಬಯಸಿರುವುದು ಸಿಪಿಐ(ಎಂ) ಹಾಗೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನಿರಂತರ ನಡೆಯುತ್ತಿರುವ ಘರ್ಷಣೆಗೆ ಕಾರಣ ಎಂದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಕೋಮುವಾದಿ ರಾಜಕೀಯ ಮತ್ತು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರಕಾರದ ದುರಡಳಿತದ ವಿರುದ್ಧ ಹೋರಾಡಬೇಕಿದೆ ಎಂದು ಆ್ಯಂಟನಿ ತಿಳಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಂದೇ ರೆಕ್ಕೆಯ ಎರಡು ಹಕ್ಕಿಗಳು ಎಂದು ಬಣ್ಣಿಸಿದ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಿಲ, ಇಬ್ಬರು ನಾಯಕರೂ ಸರ್ವಾಧಿಕಾರಿ ಧೋರಣೆಯುಳ್ಳವರು ಎಂದು ಟೀಕಿಸಿದರು. ಯುಡಿಎಫ್ ಮುಖಂಡರಾದ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ, ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ಮುಖಂಡ ಪಣಕ್ಕಾಡ್ ಹೈದರಾಲಿ ತಂಙಳ್, ಕೆಪಿಸಿಸಿ ಅಧ್ಯಕ್ಷ ವಿ.ಎಂ.ಸುಧೀರನ್ ಮುಂತಾದವರು ಉಪಸ್ಥಿತರಿದ್ದರು.







