‘ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟ ಎಲ್ಲರಿಗೂ ಮಾದರಿ’ : ವಿಚಾರ ಸಂಕಿರಣದಲ್ಲಿ ಟಿ.ವೆಂಕಟೇಶ್

ಕಲ್ಯಾಣಪುರ, ಫೆ.6:ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಾಗಿರದೆ,ಇಡೀ ಸಮಾಜದ ಶಕ್ತಿಯಾಗಿದ್ದರು. ಅವರ ಶಿಕ್ಷಣ, ಸಂಘಟನೆ, ಹೋರಾಟ ಎಲ್ಲರಿಗೂ ಮಾದರಿ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜುಗಳ ಸಹಯೋಗದಲ್ಲಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ಭಾರತ ಭಾಗ್ಯ ವಿಧಾತ’ ಡಾ.ಬಿ.ಆರ್. ಅಂಬೇಡ್ಕರ್ ವಿಚಾರ ಸಂಕಿರಣ ಹಾಗೂ ಅವರ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ವೆಂಕಟೇಶ್ ಮಾತನಾಡುತಿದ್ದರು.
ಅಂಬೇಡ್ಕರ್ ಅವರ ಘೋಷಣೆಗಳಾದ ಶಿಕ್ಷಣ, ಸಂಘಟನೆ, ಹೋರಾಟ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವಂತೆ ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಅಂಬೇಡ್ಕರ್ ಅವರ ಅಪೂರ್ವ ಛಾಯಾಚಿತ್ರಗ ಪ್ರದರ್ಶನವನ್ನು ಉದ್ಘಾಟಿಸಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಅಂಬೇಡ್ಕರ್ ಅವರ ಅಪೂರ್ವ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಕಾಲೇಜಿನ ಕ್ಯಾಂಪಸ್ ಡೈರೆಕ್ಟರ್ ವಂ. ಡಾ.ಪ್ರಕಾಶ್ ಅನಿಲ್ ಕ್ಯಾಸ್ತಲಿನೋ ಮಾತನಾಡಿ, ಅಂಬೇಡ್ಕರ್ ಉತ್ತಮ ವಾಗ್ಮಿ ಹಾಗೂ ಪಂಡಿತರಾಗಿದ್ದರು. ಅವರ ಭಾಷಾ ಪಾಂಡಿತ್ಯ ಅತ್ಯುತ್ತಮವಾಗಿತ್ತು. ಸಮಾನತೆ ಬಗ್ಗೆ ಶಿಕ್ಷಣದ ಬಗ್ಗೆ ಅವರು ಆಸಕ್ತಿ ವಹಿಸಿದ್ದು, ಅವರ ಸಾಧನೆ ವಿದ್ಯಾರ್ಥಿಗಳಿಗೆ ದಾ ಪ್ರೇರಣೆಯಾಗಿದೆ ಎಂದರು.
ವಿಶೇಷ ಉಪನ್ಯಾಸಕರಾದ ಬೆಂಗಳೂರಿನ ಚಿಂತಕ, ಲೇಖಕ ಶಿವಸುಂದರ್ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವಿನೀತ್ ರಾವ್ ಉಪಸ್ಥಿತರಿದ್ದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೋ ಸ್ವಾಗತಿಸಿದರೆ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಪ್ರಾಸ್ತಾವಿಕ ಮಾತುಗಳಾಡಿದರು. ಪ್ರಾಧ್ಯಾಪಕ ಪ್ರೊ.ಸಿರಿಲ್ ಮಥಾಯಿಸ್ ವಂದಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಯರಾಂ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಂದ ಅಂಬೇಡ್ಕರ್ ಕುರಿತ ಪ್ರಬಂಧ ಮಂಡನೆ ನಡೆಯಿತು. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.







