ಸಮಾನತೆ ಮೂಲಭೂತ ಹಕ್ಕಾಗಲಿ: ಶಿವಸುಂದರ್

ಉಡುಪಿ, ಫೆ.6: ಪ್ರಜ್ಞೆ, ಶೀಲ, ಕಾರುಣ್ಯ, ಮೈತ್ರಿಯುಳ್ಳ ಮಮತೆ ಮತ್ತು ಸಮಾನತೆಯ ಮೌಲ್ಯಗಳನ್ನು ಅಳವಡಿಸಿದ ದಾರ್ಶನಿಕ ದೃಷ್ಟಿಯನ್ನು ನಮಗೆ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್. ಭವಿಷ್ಯದ ಸಮಾನತೆಯ ಮರು ಹುಟ್ಟಿಗೋಸ್ಕರ ನಾವು ಅಂಬೇಡ್ಕರ್ ಅವರನ್ನು ಅಭ್ಯಸಿಸಬೇಕು ಎಂದು ಚಿಂತಕ, ಖ್ಯಾತ ಅಂಕಣಕಾರ ಬೆಂಗಳೂರಿನ ಶಿವಸುಂದರ ಹೇಳಿದ್ದಾರೆ.
ಎಲ್ಲರೂ ಗೆದ್ದವರ ಚರಿತ್ರೆಯನ್ನು ಬರೆದಿದ್ದಾರೆ. ಆದರೆ ಅಂಬೇಡ್ಕರ್ ಬರೆದಿರುವುದಿ ಸೋತವರ ಚರಿತ್ರೆಯನ್ನು. ಸಮಾನ ಸಮಾಜ ರಚನೆಗೆ ಸ್ವತಂತ್ರ ಭಾರತ ಎಂದಾಗ ಅಂಬೇಡ್ಕರ್ ದೃಷ್ಟಿಯಲ್ಲಿ ಏನಿತ್ತು ಎಂಬುದನ್ನು ಅರಿಯಲು ನಾವು ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿರಬೇಕಾದ ಸ್ವಾತಂತ್ರಗಳೇನು ಎಂಬುದನ್ನು ಅವರು ಸವಿವರವಾಗಿ ವಿವರಿಸಿದ್ದಾರೆ ಎಂದರು.
‘ಅಂಬೇಡ್ಕರ್ ಅಧ್ಯಯನ ವಿಧಾನಗಳು’ ಕುರಿತು ಮಾತನಾಡಿದ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವಿನೀತ್ ರಾವ್, ಸಂಶೋಧಕರಿಗೆ ಮಾದರಿ ಅಂಬೇಡ್ಕರ್. ಅವರ ಜೀವನದ ಪ್ರತಿ ದಿನವೂ ಅಧ್ಯಯನ ಯೋಗ್ಯ. ಸಾರ್ವಕಾಲಿಕ ಸಾಮಾಜಿಕ ನ್ಯಾಯ, ಸಮಾನತೆಗಳ ಬಗ್ಗೆ ಅವರ ದೃಷ್ಟಿಕೋನ ಹಾಗೂ ಪ್ರತಿಪಾದನೆಗಳು, ವಿವಿಧ ಜ್ಞಾನ ಶಾಖೆಗಳಿಗೆ ಅವರ ಕೊಡುಗೆಯ ಬಗ್ಗೆ ವಿವರಿಸಿದರು.
ಆರ್ಥಿಕ ತಜ್ಞ, ಕಾನೂನು ತಜ್ಞ, ಜಲತಜ್ಞ, ಕಾರ್ಮಿಕ ಹಕ್ಕಿನ ಬಗ್ಗೆ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ, ಕೌಶಲ್ಯ ಅಭಿವೃದ್ದಿ ಬಗ್ಗೆ ನೀಡಿರುವ ವರದಿಗಳು ಇಂದಿಗೂ ಪ್ರಸ್ತುತ. ಭಾರತದ ಆರ್ಥಿಕ ವ್ಯವಸ್ಥೆಗೆ ಕೊನೆಗೆ ಆರ್‌ಬಿಐ ಸ್ಥಾಪನೆಗೂ ಅವರ ದೂರದೃಷ್ಟಿಯೇ ಕಾರಣವಾಯಿತು ಎಂದು ವಿನೀತ್ ಹೇಳಿದರು.
ಅಪರಾಹ್ನ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಮಿಲಾಗ್ರಿಸ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಸಿರಿಲ್ ಮಥಾಯಸ್, ಇತಿಹಾಸ ಪ್ರಾಧ್ಯಾಪಕ ಡಾ.ಜಯರಾಂ ಶೆಟ್ಟಿಗಾರ್ ಉಪಸ್ಥಿತರಿದ್ದರು.







