ಸಹಾರಾದ ರಿಯಲ್ ಎಸ್ಟೇಟ್ ಆಸ್ತಿ ಜಪ್ತಿಗೆ ಸುಪ್ರೀಂ ಆದೇಶ

ಹೊಸದಿಲ್ಲಿ,ಫೆ.6: ಸಹರಾ ಸಮೂಹವು ತನ್ನ ಹೂಡಿಕೆದಾರರಿಗೆ ವಂಚಿಸಿದ 14 ಸಾವಿರ ಕೋಟಿ ರೂ. ಮೊತ್ತವನ್ನು ವಸೂಲು ಮಾಡಲು,ಸಂಸ್ಥೆಯ ರಿಯಲ್‌ಎಸ್ಟೇಟ್ ಯೋಜನೆಯಾದ 'ಆ.್ಯಂಬಿ ವ್ಯಾಲಿ'ಯ ಆಸ್ತಿಪಾಸ್ತಿಯನ್ನು ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ.
ಹೂಡಿಕೆದಾರರಿಗೆ ಹಣವನ್ನು ಮರುಪಾವತಿಸುವ ಕಾಲಾವಕಾಶವನ್ನು ಜುಲೈ 19ರವರೆಗೆ ವಿಸ್ತರಿಸುವ ಸಹಾರದ ಪ್ರಸ್ತಾಪವು ತುಂಬಾ ದೀರ್ಘಾವಧಿಯದ್ದೆಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಅಭಿಪ್ರಾಯಪಟ್ಟಿತು ಹಾಗೂ ಈ ಮೊತ್ತವನ್ನು ಮರುವಸೂಲು ಮಾಡಲು ನ್ಯಾಯಾಲಯವು ಆ್ಯಂಬಿವ್ಯಾಲಿ ರಿಯಲ್‌ಎಸ್ಟೇಟ್‌ನ ಆಸ್ತಿಯನ್ನು ಜಪ್ತಿ ಮಾಡಲಿದೆಯೆಂದು ಅದು ಹೇಳಿತು. ಆ್ಯಂಬಿ ವ್ಯಾಲಿ ಘೋಷಿತ ಆಸ್ತಿಯ ಒಟ್ಟು ವೌಲ್ಯವು , 39 ಸಾವಿರ ಕೋಟಿ ರೂ. ಆಗಿದೆ.
ತಾನು ಹೊಂದಿರುವ ಋಣಭಾರರಹಿತ ಆಸ್ತಿಗಳ ಪಟ್ಟಿಯನ್ನು ಫೆಬ್ರವರಿ 20ರೊಳಗೆ ಸಲ್ಲಿಸುವಂತೆ ಹಾಗೂ ಸಹಾರಾ ಸಂಸ್ಥೆಗೆ ಆದೇಶಿಸಿದ ನ್ಯಾಯಪೀಠವು, ಅವುಗಳನ್ನು ಹರಾಜು ಹಾಕುವ ಕುರಿತು ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದೆ. ಹೂಡಿಕೆದಾರರಿಗೆ ತ್ವರಿತವಾಗಿ ಹಣವನ್ನು ಮರುಪಾವತಿಸುವಂತೆ ಸಹಾರ ಗ್ರೂಪ್‌ಗೆ ಒತ್ತಞ ಹೇರುವುದಾಗಿ ಅದು ತಿಳಿಸಿತು ಹಾಗೂ ಕಂತುಗಳಲ್ಲಿ ಹಣವನ್ನು ಮರುಪಾವತಿಸುವ ಸಂಸ್ಥೆಯ ಪ್ರಸ್ತಾಪವನ್ನು ಒಪ್ಪಲು ಅದು ನಿರಾಕರಿಸಿತು. ಪ್ರಕರಣದ ಆಲಿಕೆಯನ್ನು ನ್ಯಾಯಪೀಠವು ಫೆಬ್ರವರಿ 27ಕ್ಕೆ ಮುಂದೂಡಿದೆ.
ಸಹರಾ ಗ್ರೂಪ್‌ನ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ಜಪ್ತಿ ಆದೇಶವನ್ನು ಜಾರಿಗೊಳಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಬ್ಯಾಂಕ್‌ಗಳಾಗಲಿ ಅಥವಾ ಹೂಡಿಕೆದಾರರಾಗಲಿ ಮರುಪಾವತಿಯನ್ನು ತ್ವರಿತವಾಗಿ ಪಾವತಿಸುವಂತೆ ಆಗ್ರಹಿಸುತ್ತಿಲ್ಲವೆಂದು ಹೇಳಿದ ಅವರು, ಕಂಪೆನಿಯು ಈಗಾಗಲೇ ಶೇ.85ರಷ್ಟು ಹೂಡಿಕೆದಾರರಿಗೆ ಹಣವನ್ನು ಮರುಪಾವತಿಸಿದೆಯೆಂಬುದನ್ನು ಸಾಬೀತುಪಡಿಸುವ ಆದಾಯ ತೆರಿಗೆ ಮೇಲ್ಮನವಿ ಟ್ರಿಬ್ಯೂನಲ್ ಆದೇಶವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದರು. ಅದನ್ನೊಪ್ಪದ ನ್ಯಾಯಾಲಯವು ತನ್ನ ಆದೇಶವನ್ನು ಪರಾಮರ್ಶಿಸಲು ನಿರಾಕರಿಸಿತು. ಸಹರಾ ಕಂಪೆನಿಯು ಈಗಾಗಲೇ ತನ್ನ ಹೂಡಿಕೆದಾರರಿಗೆ 11 ಸಾವಿರ ಕೋಟಿ ರೂ. ಮಾತ್ರ ಪಾವತಿಸಿದೆ. ಉಳಿದ 14,779 ಕೋಟಿ ರೂ. ಮರುಪಾವತಿಸಲು ತನಗೆ 2019ರ ಜುಲೈವರೆಗೆ ಕಾಲಾವಕಾಶವನ್ನು ಅದು ಕೋರಿತ್ತು.







