ಕಲ್ಲಬೆಟ್ಟು : ಚಿರತೆ ದಾಳಿಗೆ ಕರು ಬಲಿ

ಮೂಡುಬಿದಿರೆ,ಫೆ.6: ಇಲ್ಲಿಗೆ ಸಮೀಪದ ಕಲ್ಲಬೆಟ್ಟು ಗ್ರಾಮದ ನೀರಲ್ಕೆ ಎಂಬಲ್ಲಿ ಮನೆ ಆವರಣದಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಚಿರತೆಯೊಂದು ಬಲಿ ತೆಗೆದುಕೊಂಡ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ನೀರಲ್ಕೆಯ ಗುಜುರಿ ವ್ಯಾಪಾರಿ ಸುಲೈಮಾನ್ ಎಂಬವರ ಮನೆ ಆವರಣದಲ್ಲಿ ಈ ಘಟನೆ ನಡೆದಿದೆ. ಚಿರತೆ ಕರುವನ್ನು ಅರ್ಧ ತಿಂದು ಬಿಟ್ಟು ಹೋಗಿದೆ. ಚಿರತೆ ದಾಳಿಗೆ ಕರು ಸಾವನಪ್ಪಿದ್ದು ಸೋಮವಾರ ಬೆಳಿಗ್ಗೆಯಷ್ಟೆ ಮನೆಯವರಿಗೆ ಪ್ರಕರಣ ಗೊತ್ತಾಯಿತ್ತೆನ್ನಲಾಗಿದೆ. ಮೂಡುಬಿದಿರೆ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಹಾಗೂ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಭಾನುವಾರ ರಾತ್ರಿ ಚಿರತೆ ಕರುವನ್ನು ತಿಂದು ಹಾಕಿರಬಹುದೆಂದು ತಿಳಿಸಿದ್ದಾರೆ.
ನಂತರ ಚಿರತೆಯನ್ನು ಸೆರೆ ಹಿಡಿಯಲು ಸಾವನ್ನಪ್ಪಿದ ಕರುವನ್ನು ಬೋನಿನೊಳಗೆ ಇಡಲಾಗಿದೆ. ಕಳೆದೆರಡು ತಿಂಗಳಿನಿಂದ ಚಿರತೆಯೊಂದು ಕಲ್ಲಬೆಟ್ಟು ಕರಿಂಜೆ ಆಸುಪಾಸಿನಲ್ಲಿ ಓಡಾಡುತ್ತಿದ್ದು ಈಗಾಗಲೇ ಮೂರು ಹಸುಗಳನ್ನು ಕೊಂದು ಹಾಕಿದೆ. ಚಿರತೆ ಓಡಾಟದಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.





