ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ 14ನೆ ವಾರ್ಷಿಕೋತ್ಸವ

ಮುಲ್ಕಿ, ಫೆ.6: ಕುಟುಂಬದ ಚೈತನ್ಯ ಶಕ್ತಿಯೇ ಮಹಿಳೆ. ಮಹಿಳೆಯರು ಸಮಾಜದ ಮುಂಚೂಣಿಗೆ ಬಂದಾಗ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವ ಹೇಳಿದರು.
ಅವರು ಕಿನ್ನಿಗೋಳಿಯ ಎಸ್‌ಕೋಡಿಯಲ್ಲಿ ನಡೆದ ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ 14ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಪುರುಷರಷ್ಟೇ ಸರಿ ಸಮಾನತೆಯನ್ನು ಹೊಂದುತ್ತಿದ್ದಾಳೆ ಎಂದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರಾದ ರಕ್ಷಿತಾ, ನಿತೇಶ್ ಹಾಗೂ ಶಶಿಕಲಾ ಅವರಿಗೆ ಸಹಾಯ ಧನ, ಅನಾರೋಗ್ಯ ಪೀಡಿತೆ ಸುಷ್ಮಾ ಅವರಿಗೆ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಯೋಗೀಶ್ ರಾವ್, ಇಂದಿರಾಗಾಂಧಿ ಮಕ್ಕಳ ಅರೋಗ್ಯ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕಿ ಶೈಲಾ ಸಿಕ್ವೇರಾ, ಪುನರೂರು ಭಾರತ ಮಾತಾ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ರಾವ್, ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ ಗೌರವಾಧ್ಯಕ್ಷೆ ಶಾಲೆಟ್ ಪಿಂಟೊ, ಸಂಘಟಕಿ ನಂದಾ ಪಾಯಸ್, ಅಧ್ಯಕ್ಷೆ ದಮಯಂತಿ, ಕಾರ್ಯದರ್ಶಿ ಶೋಭಾ ರಾವ್, ಕೋಶಾಧಿಕಾರಿ ಸಂಜೀವಿ ಜೆ. ಶೆಟ್ಟಿ, ಶಶಿ ಸುರೇಶ್, ಪ್ರಮೀಳಾ ಡಿ. ಸುವರ್ಣ, ಆಶಾಲತ ಮತ್ತಿತರರು ಉಪಸ್ಥಿತರಿದ್ದರು.







