ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಗೆ ಮೂಡಿಗೆರೆ ವಿದ್ಯಾರ್ಥಿನಿ ಆಯ್ಕೆ

ಮೂಡಿಗೆರೆ, ಫೆ.6: ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಪ್ರಬಂಧ ಸ್ಪರ್ಧೆಗೆ ರಾಜ್ಯ ಪರಂಪರೆ ಹಾಗೂ ಪುರಾತತ್ವ ಇಲಾಖೆ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿದೆ.
ಫೆ.11ರಂದು ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿ ಸುವಂತೆ ಮೂಡಿಗೆರೆ ಸರಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆಯಿಷತ್ ತಪ್ಸೀರಾಗೆ ಪುರಾತತ್ವ ಇಲಾಖೆ ತಿಳಿಸಿದೆ. 2012-13ನೆ ಶೈಕ್ಷಣಿಕ ಸಾಲಿನಲ್ಲಿ ಚಿನ್ನಿಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೆ ತರಗತಿಯಲ್ಲಿ ಕಲಿಯುತ್ತಿದ್ದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಸೃಜನಾತ್ಮಕ ಬರವಣಿಗೆಯ ಪ್ರಬಂಧ ಸ್ಪರ್ಧೆಯಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದರು.
2014ರಲ್ಲಿ ಚಿನ್ನಿಗಾ ಪ್ರೌಢಶಾಲೆಯಲ್ಲಿ 8ನೆ ತರಗತಿಯಲ್ಲಿ ಓದುತ್ತಿದ್ದ ವೇಳೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಮುಂದುವರಿದ ಭಾಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯು ಫೆೆ.11ರಂದು ಮೈಸೂರಿನಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ ಖುದ್ದಾಗಿ ಭಾಗವಹಿಸಲು ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಚಿಕ್ಕಮಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಆದೇಶದ ಪ್ರತಿಯನ್ನು ಕಳುಹಿಸಿದೆ.
ವಿದ್ಯಾರ್ಥಿನಿ ಆಯಿಷತ್ ತಪ್ಸೀರಾ ಕರ್ನಾಟಕ ಬ್ಯಾರೀ ಸಾಹಿತ್ಯ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್ ಮತ್ತು ಜೈನಾಬಿ ದಂಪತಿಯ ಪುತ್ರಿಯಾಗಿದ್ದಾರೆ.







