ಬಿಸಿಸಿಐ ಮಾಧ್ಯಮ ಮ್ಯಾನೇಜರ್ ನಿಶಾಂತ್ ಅರೋರಾ ರಾಜೀನಾಮೆ
ಮಾಜಿ ಅಧ್ಯಕ್ಷ ಠಾಕೂರ್ ಬೆಂಬಲಿಗರಿಗೆ ಆಡಳಿತ ಸಮಿತಿ ಆಘಾತ

ಹೊಸದಿಲ್ಲಿ, ಫೆ.6: ಬಿಸಿಸಿಐನ ದಿಲ್ಲಿ ಕಚೇರಿಯನ್ನು ಮುಚ್ಚಬೇಕು ಎಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಧ್ಯಮ ಮ್ಯಾನೇಜರ್ ನಿಶಾಂತ್ ಅರೋರಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಅರೋರಾ ರವಿವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ಅರೋರಾಗೆ ಮುಂಬೈನಲ್ಲಿ ರುವ ಕ್ರಿಕೆಟ್ ಕಚೇರಿಯಲ್ಲಿ ಕೆಲಸ ಮಾಡುವಂತೆ ಸಿಒಎ ಸೂಚಿಸಿತ್ತು. ಆದರೆ, ಫೆ.9 ರಂದು ಭಾರತ-ಬಾಂಗ್ಲಾದೇಶದ ನಡುವೆ ಏಕೈಕ ಟೆಸ್ಟ್ ಪಂದ್ಯ ಆತಿಥ್ಯವಹಿಸಿರುವ ಹೈದರಾಬಾದ್‌ಗೆ ತೆರಳದ ಅರೋರ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ದಿಲ್ಲಿಯಲ್ಲಿರುವ ಬಿಸಿಸಿಐನ ಕಚೇರಿಯ ಸಿಬ್ಬಂದಿಯನ್ನು ನೇಮಕ ಮಾಡಿದ್ದರು. ಠಾಕೂರ್‌ರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಅವರು ನೇಮಕ ಮಾಡಿರುವ ಸಿಬ್ಬಂದಿಯನ್ನು ಕಡ್ಡಾಯವಾಗಿ ವಜಾಗೊಳಿಸಬೇಕಾಗಿದೆ.
‘‘ಬಿಸಿಸಿಐನ ದಿಲ್ಲಿ ಕಚೇರಿಯನ್ನು ಮುಚ್ಚುವಂತೆ ಸೂಚಿಸಿದ್ದೆವು. ಅಲ್ಲಿ ನೇಮಕಗೊಂಡಿರುವ ಸಿಬ್ಬಂದಿಯೂ ಹುದ್ದೆ ತೊರೆಯಬೇಕೆಂದು ಹೇಳಿದ್ದೆವು. ನಾವು ನಿಶಾಂತ್ ಹೆಸರನ್ನು ಹೇಳಿಲ್ಲ. ಅವರು ದಿಲ್ಲಿ ಕಚೇರಿಯ ಸಿಬ್ಬಂದಿ ಆಗಿದ್ದರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಮಾಧ್ಯಮ ಮ್ಯಾನೇಜರ್ ಒಪ್ಪಂದ ಸ್ವತಂತ್ರವಾಗಿದ್ದರೆ, ರಾಹುಲ್(ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ) ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ನಿಶಾಂತ್‌ರಿಂದ ತೆರವಾಗಿರುವ ಸ್ಥಾನಕ್ಕೆ ರಾಹುಲ್ ಅವರೇ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ’’ ಎಂದು ಸಿಒಎ ಸದಸ್ಯೆ ಡಿಯಾನಾ ಎಡುಲ್ಜಿ ಹೇಳಿದ್ದಾರೆ.
ನಿಶಾಂತ್ ಅರೋರಾ ಕಳೆದ 18 ತಿಂಗಳುಗಳಿಂದ ಬಿಸಿಸಿಐನ ಮಾಧ್ಯಮ ಮ್ಯಾನೇಜರ್ ಆಗಿದ್ದು, ಆಸ್ಟ್ರೇಲಿಯ, ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ಗೆ ಟೀಮ್ ಇಂಡಿಯಾದೊಂದಿಗೆ ತೆರಳಿದ್ದರು.







