ದಲಿತ ಕುಟುಂಬಕ್ಕೆ ನಿಂದನೆ : ಪ್ರಕರಣ ದಾಖಲು

ಬಂಟ್ವಾಳ,ಫೆ.6; ನೀವು ದೇವಸ್ಥಾನಕ್ಕೆ ಹೋಗಬಾರದು, ಅಶ್ವಥ ಕಟ್ಟೆ ಸುತ್ತಬಾರದು ಎಂದು ಮನೆಮಾಲಕಿಯೇ ದಲಿತ ಕುಟುಂಬವೊಂದನ್ನು ನಿಂದಿಸಿ, ಮನೆಬಿಟ್ಟು ಹೋಗುವಂತೆ ಬೆದರಿಕೆ ಒಡ್ಡಿದ ಘಟನೆ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ನಡೆದಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರಿಕೊಂಬು ಗ್ರಾಮದ ಮೊಗರ್ನಾಡು ವಿನಲ್ಲಿ ಭಗೀರಥ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆದಾರನಾಗಿ ವಾಸ್ತವ್ಯವಿರುವ ದೇವಯ್ಯ ಹೆಚ್.ಟಿ ಎಂಬವರೇ ಈ ದೂರು ನೀಡಿದವರಾಗಿದ್ದು, ಮನೆಮಾಲಕ ಭಗೀರಥ ಎಂಬವರ ಪತ್ನಿ ಮಮತಾ ರವರೇ ತಮಗೆ ಮಾನಸಿಕ ಕಿರುಕುಳ ನೀಡುವವರು ಎಂದವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲೇನಿದೆ..?
ತಾನು ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಮಡಿಕೇರಿಯಿಂದ ಪಾಣೆಮಂಗಳೂರು ಶಾಖೆಗೆ ವರ್ಗಾವಣೆಗೊಂಡ ಬಳಿಕ ಕಳೆದ ಸೆ.2 ರಿಂದ ಮೊಗರ್ನಾಡುವಿನ ಭಗೀರಥ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆದಾರನಾಗಿ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಜೊತೆ ವಾಸ್ತವ್ಯವಿದ್ದೇನೆ.
ಪ್ರತಿದಿನ ಕೆಲಸ ಮುಗಿಸಿ ಬರುವ ವೇಳೆ ಮನೆಹತ್ತಿರದ ಮಕ್ಕಳಿಗೂ ಚಾಕಲೇಟು ಕೊಡುತ್ತಿದ್ದು ನೆರೆಯವರ ಜೊತೆಗೂ ಅನ್ಯೋನ್ಯವಾಗಿದ್ದೇನೆ. ಆದರೆ ಕೆಲ ದಿನಗಳಿಂದ ಮನೆಮಾಲಕರ ಪತ್ನಿ ಮಮತಾರವರು, ಕಾರಣವಿಲ್ಲದೆ ತಗಾದೆ ತೆಗೆಯುತ್ತಿದ್ದು, ನನ್ನ ಮಗಳಾದ ಪೂರ್ಣಿಮಾಳು ದಿನಾ ಬೆಳಿಗ್ಗೆ ಪಕ್ಕದ ಲಕ್ಷ್ಮೀ ನರಸಿಂಹ ದೇವಸ್ಥಾನಕೆ ಹೋಗಿ ಅಲ್ಲಿರುವ ಅಶ್ವಥಕಟ್ಟೆಗೆ ಸುತ್ತು ಬರುತ್ತಿರುವಾಗ ಆಕ್ಷೇಪಿಸಿದ್ದಾರೆ. ಅಲ್ಲದೆ ನನ್ನನ್ನು ಕರೆಯಿಸಿ ನೀನು ದಲಿತಜನಾಂಗಕ್ಕೆ ಸೇರಿದ ಕೀಳುಜಾತಿಯವರು, ಅಶ್ವಥಕಟ್ಟೆ ಸುತ್ತಬಾರದು, ಇದರಿಂದ ದೇವಸ್ಥಾನಕ್ಕೆ ಮೈಲಿಗೆಯಾಗುತ್ತದೆ , ಈಗಲೇ ಮನೆಬಿಟ್ಟು ಹೋಗಿ ಇಲ್ಲವಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ , ಅಲ್ಲದೆ ನನ್ನ ಪತ್ನಿಗೂ, ಇಬ್ಬರು ಹೆಣ್ಣುಮಕ್ಕಳಿಗೂ ಜಾತಿಯ ವಿಚಾರ ಎತ್ತು ಅವಾಚ್ಯಶಬ್ದಗಳಿಂದ ನಿಂದಿಸಿ ನಮ್ಮ ಮಾನಹಾನಿ ಮಾಡಿದ್ದಾರೆ ಎಂದು ದೇವಯ್ಯ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದ್ದಾರೆ.
ತನಿಖೆ ನಡೆಸುತ್ತಿದ್ದೇವೆ- ಎಸೈ ನಂದಕುಮಾರ್
ದಲಿತಕುಟುಂಬವೊಂದರ ಮೇಲೆ ಮಾನಸಿಕ ದೌರ್ಜನ್ಯ ನಡೆದಿರುವ ಬಗ್ಗೆ ಭಾನುವಾರ ರಾತ್ರಿ ಠಾಣೆಗೆ ದೂರುನೀಡಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ನಗರ ಠಾಣಾಧಿಕಾರಿ ನಂದಕುಮಾರ್ ತಿಳಿಸಿದ್ದಾರೆ.







