ಸ್ವಾತಿ ಮಲಿವಾಲ್‌ಗೆ ಜಾಮೀನು ಮಂಜೂರು
ಸ್ವಾತಿ ಮಲಿವಾಲ್‌ಗೆ ಜಾಮೀನು ಮಂಜೂರು
ಹೊಸದಿಲ್ಲಿ, ಫೆ.6: ದಿಲ್ಲಿ ಮಹಿಳಾ ಆಯೋಗದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕಿ ಹಾಗೂ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರಿಗೆ ವಿಶೇಷ ನ್ಯಾಯಾಲವೊಂದು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಇದೊಂದು ದಾಖಲೆ ಆಧಾರಿತ ವಿಷಯವಾಗಿರುವ ಕಾರಣ ಸ್ವಾತಿ ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸುವ ಅಗತ್ಯವಿಲ್ಲ. ಆದ್ದರಿಂದ 20 ಸಾವಿರ ರೂ. ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತದ ಜಾಮೀನು ಮುಚ್ಚಳಿಕೆ ನೀಡಿದರೆ ಜಾಮೀನು ನೀಡಬಹುದು ಎಂದು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಹೆಮಾನಿ ಮಲ್ಹೋತ್ರಾ ತಿಳಿಸಿದರು. ಭ್ರಷ್ಟಾಚಾರ ನಿಗ್ರಹ ದಳವು ತನ್ನ ಸೂಚನೆ ಪ್ರಕಾರ ತನಿಖೆ ನಡೆಸುತ್ತಿದೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ ತನಿಖಾಧಿಕಾರಿ ಅತುಲ್ ಶ್ರೀವಾಸ್ತವ, ತನಿಖೆ ಪೂರ್ಣಗೊಳ್ಳಲು ಇನ್ನಷ್ಟು ಸಮಯ ಹಿಡಿಯಬಹುದು ಎಂದು ತಿಳಿಸಿದರು. ಸ್ವಾತಿ ಅವರು ನಡೆಸಿದ್ದಾರೆ ಎನ್ನಲಾದ ಅಕ್ರಮಕ್ಕೆ ಯಾರ ವೌನ ಸಮ್ಮತಿಯ ಸಹಕಾರ ಇತ್ತು ಎಂಬ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತು. ದಿಲ್ಲಿ ಮಹಿಳಾ ಆಯೋಗದ ಸದಸ್ಯರನ್ನಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಅಕ್ರಮವಾಗಿ ನೇಮಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ವಾತಿ ಮಲಿವಾಲ್ ವಿರುದ್ಧ 2016ರ ಡಿ.21ರಂದು ಆರೋಪಪಟ್ಟಿ ದಾಖಲಿಸಲಾಗಿತ್ತು.





