ಲಾಕಪ್ ಡೆತ್: ಯಾರು ಹೊಣೆ?

ಗದಗ್‌ನ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವಿರುದ್ಧ ಸ್ಥಳೀಯರು ದಂಗೆಯೆದ್ದಿದ್ದಾರೆ. ಅಕ್ರಮ ಮರಳು ಸಾಗಣೆ ಆರೋಪದಲ್ಲಿ ಬಂಧಿಸಲ್ಪಟ್ಟ ಓರ್ವ ವ್ಯಕ್ತಿ ನಿಗೂಢವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಮಸ್ಥರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 30 ಲಕ್ಷ ರೂಪಾಯಿ ಬೆಲೆಯ ಸೊತ್ತು ನಷ್ಟವಾಗಿದೆ. ಆರೋಪಿಯ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ‘ಪೊಲೀಸರು ಮೃತನಿಗೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ’ ಎಂದು ಮೃತನ ಕುಟುಂಬ ಹೇಳಿದರೆ, ಇತ್ತ ಪೊಲೀಸ್ ಇಲಾಖೆ ‘ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ’ ಎಂದು ಹೇಳುತ್ತಿದೆ. ಇದೀಗ ಪ್ರಕರಣವನ್ನು ಸಿಐಡಿಗೆ ನೀಡಲಾಗಿದ್ದು, ಪಿಎಸ್ಸೈ ದೇವಾನಂದ್ ಮತ್ತು ಚಾಲಕ ಪೂಜಾರಿ ಅವರನ್ನು ಅಮಾನತು ಮಾಡಲಾಗಿದೆ. ಒಟ್ಟಿನಲ್ಲಿ, ಇಡೀ ಪ್ರಕರಣ ಪೊಲೀಸರ ಕಾರ್ಯವೈಖರಿಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿದೆ.
ನಿಜಕ್ಕೂ ಸಂತ್ರಸ್ತ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದನೋ ಅಥವಾ ಸಂದರ್ಭವನ್ನು ದುಷ್ಕರ್ಮಿಗಳು ಪೊಲೀಸರ ವಿರುದ್ಧ ಬಳಸಿಕೊಂಡರೋ ಎನ್ನುವುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಲಾಕಪ್ ಡೆತ್ ಪ್ರಕರಣಗಳು ಹೆಚ್ಚುತ್ತಿವೆ. ಈಶಾನ್ಯ ಭಾರತ, ಜಮ್ಮು ಕಾಶ್ಮೀರದಂತಹ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗೆ ಹೋದ ವ್ಯಕ್ತಿ ಮರಳಿ ಬರುತ್ತಾನೆ ಎನ್ನುವ ಧೈರ್ಯವನ್ನು ಕುಟುಂಬಸ್ಥರು ಕಳೆದುಕೊಂಡಿರುತ್ತಾರೆ. ಕಳೆದ ವರ್ಷ ದೇಶಾದ್ಯಂತ 25,000ಕ್ಕೂ ಅಧಿಕ ಪೊಲೀಸ್ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಒಂದು ವರದಿಯ ಪ್ರಕಾರ ನೂರಕ್ಕೂ ಅಧಿಕ ಮಂದಿ ಪೊಲೀಸ್ ಠಾಣೆಯಲ್ಲಿ ನಿಗೂಢವಾಗಿ ಸತ್ತಿರುವುದು ಬೆಳಕಿಗೆ ಬಂದಿದೆ. ಇವೆಲ್ಲವೂ ಪೊಲೀಸ್ ದೌರ್ಜನ್ಯದಿಂದಲೇ ನಡೆಯಬೇಕು ಎಂದಿಲ್ಲ. ಅನೇಕ ಸಂದರ್ಭದಲ್ಲಿ ಅಪರಾಧಿಗಳ ಜೊತೆಗೆ ಬದುಕುತ್ತಾ ಪೊಲೀಸರೂ ಮಾನಸಿಕವಾಗಿ ಸಂವೇದನೆಯನ್ನು ಕಳೆದುಕೊಂಡಿರುತ್ತಾರೆ. ಅಪರಾಧಿಗಳ ಜೊತೆಗೆ ವರ್ತಿಸುವ ಬೇರೊಂದು ದಾರಿಯನ್ನು ಅವರಿಗೆ ಕಾನೂನು ವ್ಯವಸ್ಥೆಯಾಗಲಿ, ಹಿರಿಯ ಅಧಿಕಾರಿಗಳಾಗಲಿ ಕಲಿಸಿರುವುದಿಲ್ಲ. ಕಾನೂನಿನ ಕೆಲವು ಸೂಕ್ಷ್ಮಗಳಿಗೆ, ತನಿಖೆಯ ಸಂದರ್ಭದಲ್ಲಿ ಯಾವ ಕಿಮ್ಮತ್ತೂ ಇರುವುದಿಲ್ಲ. ಭಾರತದಲ್ಲಿ ಆರೋಪಿಗಳನ್ನು ಅಪರಾಧಿಗಳನ್ನಾಗಿ ನಡೆಸಿಕೊಳ್ಳುವುದು ಒಂದು ಸಹಜ ಪ್ರಕ್ರಿಯೆಯಾಗಿದೆ. ತಮ್ಮ ವಶಕ್ಕೆ ಆರೋಪಿಗಳು ಬಂದ ಮರುಕ್ಷಣವೇ ಪೊಲೀಸ್ ಇಲಾಖೆ ಅವರನ್ನು ಅಪರಾಧಿಗಳೆಂದು ತೀರ್ಮಾನಿಸಿ ಬಿಡುತ್ತದೆ. ನ್ಯಾಯಾಲಯದಲ್ಲಿ ನಡೆಯಬೇಕಾಗಿರುವ ವಿಚಾರಣೆ ಅವರ ಗಣನೆಯ ವ್ಯಾಪ್ತಿಯಲ್ಲಿ ಇರುವುದಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಆರೋಪಿಗಳ ಮೇಲೆ ಪೊಲೀಸರು ಎಷ್ಟು ಕ್ರೂರವಾಗಿ ವರ್ತಿಸುತ್ತಾರೆಯೋ ಅದಕ್ಕಿಂತ ಕ್ರೂರವಾಗಿ ಮಾಧ್ಯಮಗಳು ವರ್ತಿಸುತ್ತವೆ.
ಬಂಧಿಸಲ್ಪಟ್ಟ ಆರೋಪಿ ನಿಜಕ್ಕೂ ಕೃತ್ಯಗಳಲ್ಲಿ ಭಾಗವಹಿಸಿದ್ದಾನೆಯೋ ಎನ್ನುವ ಸತ್ಯಾಂಶ ಮಾಧ್ಯಮಗಳಿಗೆ ಬೇಕಾಗಿಲ್ಲ. ಪೊಲೀಸರು ಬಂಧಿಸಿದ ಬೆನ್ನಿಗೇ ಮಾಧ್ಯಮಗಳೂ ಆತನನ್ನು ಅಪರಾಧಿ ಎಂದು ತೀರ್ಪು ನೀಡಿ ಬಿಂಬಿಸುತ್ತವೆ. ಪೊಲೀಸರು ವಿಚಾರಣೆಯ ನೆಪದಲ್ಲಿ ದೈಹಿಕವಾಗಿ ಆತನ ಮೇಲೆ ಹಲ್ಲೆ ನಡೆಸಿದರೆ, ಮಾಧ್ಯಮಗಳು ಅಭಿವ್ಯಕ್ತಿಯ ಹೆಸರಿನಲ್ಲಿ ಆರೋಪಿಯ ವ್ಯಕ್ತಿತ್ವದ ಮೇಲೆ ಕ್ರೂರವಾಗಿ ದಾಳಿ ನಡೆಸುತ್ತವೆ. ಇಲ್ಲಿ ನ್ಯಾಯಾಲಯ ಅಪ್ರಸ್ತುತವಾಗುತ್ತದೆ. ನ್ಯಾಯಾಲಯದಲ್ಲಿ ಹೆಸರಿಗಷ್ಟೇ ವಿಚಾರಣೆ ನಡೆಯುತ್ತದೆ. ಸುದೀರ್ಘ ಕಾಲ ವಿಚಾರಣೆ ನಡೆದ ಬಳಿಕ ಆರೋಪಿ ನಿರಪರಾಧಿಯಾಗಿ ಬಿಡುಗಡೆಯಾಗಬಹುದು. ಆದರೆ ಅಷ್ಟರಲ್ಲಿ ಅವನು ಅನುಭವಿಸಿರುವ ಶಿಕ್ಷೆ, ಯಾವ ನ್ಯಾಯಾಲಯ ನೀಡುವ ಶಿಕ್ಷೆಗಿಂತಲೂ ಕಠಿಣವಾಗಿರುತ್ತದೆ. ಪೊಲೀಸರ ದೈಹಿಕ ದೌರ್ಜನ್ಯ ಮತ್ತು ಮಾಧ್ಯಮಗಳ ಮಾನಸಿಕ ದೌರ್ಜನ್ಯದಿಂದ ಆತ ಅಪರಾಧಿಯಾಗಿಯೇ ಸಮಾಜವನ್ನು ಪ್ರವೇಶಿಸಬೇಕಾಗುತ್ತದೆ. ನ್ಯಾಯಾಲಯದ ತೀರ್ಪು ಅವನ ಬದುಕಿನಲ್ಲಿ ಯಾವ ಪ್ರಭಾವವನ್ನೂ ಉಂಟು ಮಾಡುವುದಿಲ್ಲ. ಭಯೋತ್ಪಾದನೆಯ ವಿಷಯದಲ್ಲಂತೂ ಇದು ನೂರಕ್ಕೆ ನೂರು ನಿಜವಾಗಿ ಬಿಟ್ಟಿದೆ. ಪೊಲೀಸರು ಮತ್ತು ಮಾಧ್ಯಮಗಳ ಸಂಚಿನ ಕಾರಣದಿಂದ ಭಯೋತ್ಪಾದಕರಾಗಿ ಬಿಂಬಿತರಾಗಿ, ಹಲವು ವರ್ಷಗಳ ಕಾಲ ಜೈಲಲ್ಲಿ ಕಳೆದು, ಅಮಾಯಕರೆಂದು ನ್ಯಾಯಾಲಯದಿಂದ ಬಿಡುಗಡೆಗೊಂಡಿರುವ ನೂರಾರು ಜನರು ನಮ್ಮ ಮುಂದಿದ್ದಾರೆ. ಆದರೆ ಅವರು ನ್ಯಾಯಾಲಯದ ದಾಖಲೆಗಳಲ್ಲಷ್ಟೇ ನಿರಪರಾಧಿಗಳಾಗಿದ್ದಾರೆ. ಮಾಧ್ಯಮಗಳ ಕಣ್ಣಲ್ಲಿ, ಪೊಲೀಸರ ಕಣ್ಣಲ್ಲಿ, ಸಮಾಜದ ಕಣ್ಣುಗಳಲ್ಲಿ ಅಪರಾಧಿಗಳಾಗಿಯೇ ಬದುಕುತ್ತಿದ್ದಾರೆ. ತಮ್ಮ ಭವಿಷ್ಯವನ್ನೇ ತಾವು ಮಾಡದ ತಪ್ಪಿಗಾಗಿ ತೆತ್ತುಕೊಂಡಿದ್ದಾರೆ.
ಯಾವನೇ ಒಬ್ಬ ವ್ಯಕ್ತಿಯನ್ನು ವಿಚಾರಣೆಯ ಹೆಸರಿನಲ್ಲಿ ಅಥವಾ ಇನ್ನಿತರ ಕಾರಣಗಳಿಗಾಗಿ ವಶಕ್ಕೆ ತೆಗೆದುಕೊಳ್ಳುವಾಗ ಪೊಲೀಸರು ಹೆಚ್ಚು ಪಾರದರ್ಶಕತೆಯನ್ನು ಕಾಪಾಡಬೇಕಾಗಿದೆ. ಮನುಷ್ಯ ಜೀವವೊಂದರ ಘನತೆಯನ್ನು ಅರಿವಿನಲ್ಲಿಟ್ಟುಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಬೇಕು. ಆ ಸಂದರ್ಭದಲ್ಲಿ, ಪೊಲೀಸರು ತಮ್ಮ ಗರಿಷ್ಠ ಹೊಣೆಗಾರಿಕೆಯನ್ನು ಮರೆಯಬಾರದು. ಸದ್ಯಕ್ಕೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ, ವಿಚಾರಣೆಗೆ ತೆಗೆದುಕೊಳ್ಳುವುದೆಂದರೆ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಸಿಗುವ ಅನುಮತಿ ಎಂದು ನಂಬಿರುವ ಪೊಲೀಸರೇ ಬಹುಸಂಖ್ಯೆಯಲ್ಲಿದ್ದಾರೆ. ಇಂತಹ ಪೊಲೀಸರು ಕೆಲವೊಮ್ಮೆ, ಸ್ಥಳೀಯ ರಾಜಕೀಯ ಒತ್ತಡ, ಲೋಭಗಳಿಗೆ ಬಲಿಯಾಗಿ ಅಮಾಯಕರನ್ನು ಪೊಲೀಸ್ ಠಾಣೆಗೆ ಒಯ್ದು ಹಲ್ಲೆ ನಡೆಸುವುದೂ ಇದೆ. ಕರಾವಳಿಯಲ್ಲಿ ಸಂಘಪರಿವಾರದ ಜೊತೆಗೆ ಗುಪ್ತವಾಗಿ ಕೈಜೋಡಿಸಿರುವ ಪೊಲೀಸರು ಇದನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಸಂಘಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸರಾಗಿ ಕಾರ್ಯನಿರ್ವಹಿಸಲು ಮುಖ್ಯ ಕಾರಣ, ಅದಕ್ಕೆ ಪೊಲೀಸರಿಂದ ಸಿಕ್ಕಿರುವ ವೌನ ಸಮ್ಮತಿಯೇ ಆಗಿದೆ. ಪೊಲೀಸರು ಠಾಣೆಯಲ್ಲಿ ಹಲ್ಲೆ ನಡೆಸುವ ಮೊದಲೇ ಈ ಅನೈತಿಕ ಪೊಲೀಸರು ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸಿ, ಠಾಣೆಗೆ ಒಪ್ಪಿಸುತ್ತಾರೆ. ಅಲ್ಲಿ, ಹಲ್ಲೆಗೀಡಾದವರ ಮೇಲೆ ಪೊಲೀಸರು ಮತ್ತೆ ಮೊಕದ್ದಮೆ ದಾಖಲಿಸುತ್ತಾರೆ. ಇದು ಪರೋಕ್ಷವಾಗಿ ಲಾಕಪ್‌ನಲ್ಲಿ ನಡೆಯುವ ದೌರ್ಜನ್ಯದ ಇನ್ನೊಂದು ಮುಖವಾಗಿದೆ. ಆದುದರಿಂದಲೇ, ಕೆಲವೊಮ್ಮೆ ಪೊಲೀಸರ ಲೆಕ್ಕಾಚಾರ ತಪ್ಪಿದಾಗ ಅನಾಹುತಗಳು ಸಂಭವಿಸುತ್ತವೆ.
ಗದಗಿನಲ್ಲೂ ಇದೇ ನಡೆದಿದೆ. ಇಲ್ಲಿ ಪೊಲೀಸರು ಆರೋಪಿಯ ಮೇಲೆ ದೌರ್ಜನ್ಯ ಎಸಗಿರಲಿಕ್ಕಿಲ್ಲ ಎಂದೇ ಇಟ್ಟುಕೊಳ್ಳೋಣ. ಅಕ್ರಮ ಮರಳುಗಾರಿಕೆಯ ಮಾಫಿಯಾಗಳು ಪೊಲೀಸರು ವಿರುದ್ಧ ಸಂಚು ನಡೆಸಿದೆ ಎಂದೂ ಭಾವಿಸೋಣ. ಆದರೆ, ಈ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಾಗ ಕಾನೂನಿನ ವ್ಯಾಪ್ತಿಯೊಳಗಿದ್ದರೇ ಎನ್ನುವುದೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುವ ಅಗತ್ಯವಿದೆ. ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳು ಪೊಲೀಸ್ ಠಾಣೆಯೊಳಗೆ ಏನಾದರೂ ನಡೆಯಿತೇ? ಎನ್ನುವುದೂ ತನಿಖೆಯಿಂದ ಬೆಳಕಿಗೆ ಬರಬೇಕು. ಏನೇ ಆಗಿದ್ದರೂ, ಪೊಲೀಸರ ಮೇಲಿನ ಆಕ್ರೋಶದಿಂದ ಪೊಲೀಸ್ ಠಾಣೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದು ಅಕ್ಷಮ್ಯ. ಈ ದುಷ್ಕರ್ಮಿಗಳನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಅದರ ಜೊತೆಗೆ, ಲಾಕಪ್ ಡೆತ್‌ನ ಹಿಂದಿರುವ ಸತ್ಯಾಸತ್ಯತೆ ಬಯಲಿಗೆ ಬರಬೇಕು.







