ಸಂಸ್ಕಾರಯುತ ದೇಶದಲ್ಲೇ ಹಿರಿಯ ನಾಗರಿಕರ ರಕ್ಷಣೆಗೆ ಕಾಯ್ದೆ: ಅನುರಾಧಾ ಜಿ.
‘ಅರಿವಿನ ಸಿಂಚನ’ ಕಾರ್ಯಾಗಾರ

ಉಡುಪಿ, ಫೆ.6: ಸಂಸ್ಕೃತಿ ಇರುವ ಭಾರತದಂತಹ ದೇಶದಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ಕಾಯ್ದೆ ತರುವಂತ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ. ಅನುಭವದ ಗಣಿಯಾಗಿರುವ ಹಿರಿಯ ನಾಗರಿಕರ ಮಾರ್ಗ ದರ್ಶನ ಈ ದೇಶಕ್ಕೆ ಬೇಕಾಗಿದೆ. ಅವರ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿ ಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಹೇಳಿದ್ದಾರೆ.
ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ‘ಅರಿವಿನ ಸಿಂಚನ’ ಪಾಲಕರ ಮತ್ತು ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007ರ ಅನುಷ್ಠಾನದಲ್ಲಿ ವಿವಿಧ ಇಲಾಖೆಗಳ ಪಾತ್ರ ಮತ್ತು ಹಿರಿಯ ನಾಗರಿಕರಿಗೆ ನಗದು ರಹಿತ ವ್ಯವಹಾರದ ಕುರಿತು ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 1.23 ಲಕ್ಷ ಹಿರಿಯ ನಾಗರಿಕರು ಪಿಂಚಣಿ ಪಡೆಯುತ್ತಿದ್ದಾರೆ. ಇವರಲ್ಲಿ ಸುಮಾರು 64 ಸಾವಿರ ಮಂದಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. ಗುರುತಿನ ಚೀಟಿಯನ್ನು ಈಗಾಗಲೇ 13 ಸಾವಿರ ಮಂದಿಗೆ ವಿತರಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಮಂದಿಗೆ ಗುರುತಿನ ಚೀಟಿ ನೀಡಲು ಬಾಕಿ ಇದೆ ಎಂದರು.
ಹಿರಿಯ ನಾಗರಿಕರು ಗೌರವ ಹಾಗೂ ಘನತೆಯಿಂದ ಬಾಳಲು ಅವಕಾಶ ಮಾಡಿಕೊಡ ಬೇಕಾಗಿರುವುದು ಜಿಲ್ಲಾಡಳಿತದ ಕರ್ತವ್ಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಹಿರಿಯ ಸಿವಿಲ್ ನ್ಯಾಯಾ ಧೀಶೆ ಲತಾ ಮಾತನಾಡಿ, ಇಂದು ಹಿರಿಯರನ್ನು ಗೌರವಿಸುವುದು ತುಂಬಾ ಕಡಿಮೆಯಾಗುತ್ತಿದೆ. ನಿರ್ಲಕ್ಷಿತರನ್ನು ರಕ್ಷಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಅವರನ್ನು ನಾವು ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಾಡ ಬೇಕು. ಅವರಿಗೆ ಆರ್ಥಿಕ ಸ
ಬಲೀಕರಣ ಮತ್ತು ಎಲ್ಲ ರೀತಿಯ ರಕ್ಷಣೆ ಯನ್ನು ಒದಗಿಸಬೇಕು ಎಂದರು. ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭಾಗ್ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007ರ ಅನುಷ್ಠಾನ ಮತ್ತು ಉಡುಪಿ ಸಿಂಡಿಕೇಟ್ ಬ್ಯಾಂಕ್‌ನ ಎಲ್‌ಡಿಎಂ ಫ್ರಾನ್ಸಿಸ್ ನಗದುರಹಿತ ವ್ಯವಹಾರದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪನಾಗ್ ಸಿ.ಟಿ., ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್ ಉಪಸ್ಥಿತರಿದ್ದರು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ನಿರಂಜನ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಡ್ಯಾರಿಲ್ ವಂದಿಸಿದರು.







