ಫೆ.10-16: ಸವಣೂರಿನಲ್ಲಿ ‘ರಾಷ್ಟ್ರೀಯ ಯುವ ಸಪ್ತಾಹ-2017’
ಪುತ್ತೂರು, ಫೆ.6: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಪೆ. 10ರಿಂದ 16ರ ತನಕ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆೆ ಎಂದು ಯುವಕ ಮಂಡಲದ ಅಧ್ಯಕ್ಷ ಸಚಿನ್ ಎಸ್. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಫೆ.10ರಂದು ಶಾಸಕ ಎಸ್.ಅಂಗಾರ ಯುವ ಸಪ್ತಾಹವನ್ನು ಯುವ ಸಭಾ ಭವನದಲ್ಲಿ ಉದ್ಘಾಟಿಸುವರು. ಸವಣೂರು ಗ್ರಾಪಂ ಅಧ್ಯಕ್ಷ ಇಂದಿರಾ ಬಿ.ಕೆ. ಅಧ್ಯಕ್ಷತೆ ವಹಿಸುವರು. ಫೆ.11ರಂದು ವಿದ್ಯಾರಶ್ಮಿ ವಿದ್ಯಾಲಯದ ಬಳಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಫೆ.12ರಂದು ಸವಣೂರು ಶಾಲಾ ವಠಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ.ಫೆ13ರಂದು ಸವಣೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ ನಡೆಯಲಿದೆ. ಫೆ.14ರಂದು ಸವಣೂರು ಯುವ ಸಭಾಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಫೆ.15ರಂದು ‘ಮಾಧ್ಯಮ ಮತ್ತು ವಿದ್ಯಾರ್ಥಿಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ
ಫೆ16ರಂದು ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತಮ ಯುವ ಮಂಡಳಿ ಪ್ರಶಸ್ತಿ ಮತ್ತು ಯುವ ಪ್ರಶಸ್ತಿ ಪ್ರದಾನ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ತುಳುನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಪ್ರಶಸ್ತಿ ಪ್ರದಾನ ಮಾಡುವರು. ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲದ ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ., ಜೊತೆ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಮಾಜಿ ಅಧ್ಯಕ್ಷರಾದ ಗಂಗಾಧರ ಮತ್ತು ದಯಾನಂದ ಉಪಸ್ಥಿತರಿದ್ದರು.







