ಕಾಟಿಪಳ್ಳ: ನೂತನ ಮಾರುಕಟ್ಟೆ ಕಾಮಗಾರಿಗೆ ಚಾಲನೆ
ಸುರತ್ಕಲ್, ಫೆ.6: ಕಾಟಿಪಳ್ಳ 6ನೆ ಬ್ಲಾಕ್‌ನಲ್ಲಿ ನಿರ್ಮಾಣವಾಗುವ ನೂತನ ಮಾರುಕಟ್ಟೆಯ ಮೊದಲ ಹಂತದ ಕಾಮಗಾರಿಗೆ ಶಾಸಕ ಮೊಯ್ದಿನ್ ಬಾವಾ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 40.70 ಸೆಂಟ್ಸ್ ಸರಕಾರಿ ಜಾಗದಲ್ಲಿ ನಿರ್ಮಾಣವಾಗುವ ಸುಸಜ್ಜಿತ ಮಾರುಕಟ್ಟೆಗೆ 4 ಕೋ.ರೂ. ಮಂಜೂರಾಗಿದೆ. ಅದರಲ್ಲಿ 1.5 ಕೊ.ರೂ. ಈಗಾಗಲೇ ಬಿಡುಗಡೆಯಾಗಿದ್ದು, 50 ಲಕ್ಷ ರೂ. ಮೊತ್ತದ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ನೂತನ ಮಾರುಕಟ್ಟೆಯಲ್ಲಿ ಕೆಳ ಹಂತದ ನೆಲ ಮಹಡಿ, ಮೇಲು ಹಂತದ ನೆಲ ಮಹಡಿ ಮೊದಲನೆ ಮಹಡಿ ಮತ್ತು ಟೇರೆಸ್ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.
ಕೆಳ ಹಂತದ ನೆಲ ಮಹಡಿಯಲ್ಲಿ ಮಾಂಸಾಹಾರದ ಮಾರಾಟ ಮತ್ತು ಇತರ ಅಂಗಡಿಗಳನ್ನು ನಿರ್ಮಿಸಲಾಗುವುದು. ಅಲ್ಲದೆ, ಮೇಲಿನ ನೆಲ ಮಹಡಿಯಲ್ಲಿ ತರಕಾರಿ ಹಾಗೂ ಇತರ ಮಾರಾಟದ ಅಂಗಡಿಗಳಿಗೆ ನೀಡಲಾಗುವುದು ಎಂದರು.
ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಮಾತನಾಡಿದರು.
ಸಮಾರಂಭದಲ್ಲಿ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್, ಮಾಜಿ ಮೇಯರ್ ಗುಲ್ಝಾರ್ ಬಾನು, ಮಾಜಿ ಕಾರ್ಪೊರೇಟರ್ ಹರೀಶ್ ಸುರತ್ಕಲ್, ಜೆಇಗಳಾದ ದೇವರಾಜ್, ಅಬ್ದುಲ್ ಖಾದರ್, ಇಂಟೆಕ್‌ನ ಸದಾಶಿವ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ವೈ.ರಾಘವೇಂದ್ರ ರಾವ್, ಗುತ್ತಿಗೆದಾರ ಜಲೀಲ್, ಶರೀಫ್ ಚೊಕ್ಕಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸುರತ್ಕಲ್ ಭಾಗದ ಅಭಿವೃದ್ಧಿ ಸಹಿಸಲಾಗದ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕಿಯ ಅಥವಾ ಆರೋಪಗಳಿಗೆ ಬೆದರುವುದಿಲ್ಲ. ಚುನಾವಣೆಯ ವೇಳೆೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ.
=ಮೊಯ್ದಿನ್ ಬಾವ, ಶಾಸಕರು







