ಉತ್ತರ ಪ್ರದೇಶ : ಗೆಲುವಿನ ಗುರಿಯಿಂದ ಜಾರಿ ಸೋಲಿನ ಸುಳಿಗೆ ಸಿಲುಕಿದ ಬಿಜೆಪಿ
ಇಲ್ಲಿವೆ 5 ಪ್ರಮುಖ ಕಾರಣಗಳು

ಉತ್ತರ ಪ್ರದೇಶ ವಿಧಾನಸಭೆಯ ಪ್ರಥಮ ಹಂತದ ಚುನಾವಣೆಗೆ ಇನ್ನು ಒಂದು ವಾರ ಕೂಡ ಉಳಿದಿಲ್ಲ. ಗೆಲುವಿನತ್ತ ಸಾಗಲು ಸಿದ್ಧವಾಗಿದೆಯೆಂದು ತಿಳಿಯಲಾದ ಬಿಜೆಪಿ ಈಗ ಸೋಲಿನ ಸುಳಿಗೆ ಸಿಲುಕುವ ಎಲ್ಲಾ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಇಲ್ಲಿವೆ ಐದು ಕಾರಣಗಳು.
ಟಿಕೆಟ್ ಹಂಚಿಕೆ: ಪಕ್ಷದಲ್ಲಿ ಉ.ಪ್ರ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅಸಮಾಧಾನವಿದೆ. ಸುಮಾರು 80ಕ್ಕೂ ಅಧಿಕ ಟಿಕೆಟ್ ಗಳನ್ನು ಹೊರಗಿನವರಿಗೆ ನೀಡಲಾಗಿದೆ ಹಾಗೂ 20ರಷ್ಟು ಟಿಕೆಟ್ ಗಳನ್ನು ಪಕ್ಷ ನಾಯಕರುಗಳ ಸಂಬಂಧಿಕರಿಗೆ ನೀಡಲಾಗಿದೆ ಎಂಬ ಆರೋಪಗಳಿವೆ. ಸ್ಥಳೀಯ ನಾಯಕರುಗಳನ್ನುನಿರ್ಲಕ್ಷ್ಯಿಸಲಾಗಿದೆ ಎಂಬ ಕೂಗು ಮುಗಿಲು ಮುಟ್ಟಿದೆ.
ಅಸಂತುಷ್ಟ ಜಾಟರು: ಕಳೆದ ಲೋಕಸಭಾ ಚುನಾಣೆಯಲ್ಲಿ ಜಾಟರ ಬೆಂಬಲದಿಂದ ರಾಜ್ಯದಾದ್ಯಂತ ಬಿಜೆಪಿ ಜಯಭೇರಿ ಬಾರಿಸಿತ್ತು. 2013ರಲ್ಲಿ ನಡೆದ ಮುಝಫ್ಫರನಗರ ದಂಗೆಗಳೂ ಹಿಂದೂ ಮತಗಳು ಬಿಜೆಪಿಗೇ ಹೋಗುವಂತೆ ಮಾಡಿದ್ದವು. ಆದರೆ ಈ ಬಾರಿ ಜಾಟರಿಗೆ ಬಿಜೆಪಿ ಮೇಲೆ ಅಸಮಾಧಾನವಿದೆ. ತಮ್ಮ ಮೀಸಲಾತಿ ಬೇಡಿಕೆಯನ್ನು ಪಕ್ಷ ಪರಿಗಣಿಸಿಲ್ಲವೆಂಬ ಕೋಪವೂ ಅವರಿಗಿದೆ.
ಮುಸ್ಲಿಮರ ಬೆಂಬಲ ಎಸ್‌ಪಿ-ಕಾಂಗ್ರೆಸ್ಸಿಗೆ: ಸಮಾಜವಾದಿ ಪಕ್ಷದ ಕುಟುಂಬ ಜಗಳದಿಂದ ಮುಸ್ಲಿಂ ಮತಗಳು ಎತ್ತ ಸಾಗಬಹುದು ಎಂದು ಇತ್ತೀಚಿನವರೆಗೂ ಬಿಜೆಪಿ ಯೋಚಿಸುತ್ತಿತ್ತು. ಆದರೆ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಚುನಾವಣೆಯನ್ನು ಜತೆಯಾಗಿ ಎದುರಿಸಲು ನಿರ್ಧರಿಸಿದಂದಿನಿಂದ ಮುಸ್ಲಿಂ ಮತಗಳು ಬಹುತೇಕ ಬಿಜೆಪಿ ಕೈತಪ್ಪಲಿವೆ. ಮುಸ್ಲಿಮರು ಒಂದೋ ಸಮಾಜವಾದಿ ಪಕ್ಷಕ್ಕೆ ಇಲ್ಲವೇ ಬಿ ಎಸ್ ಪಿ ಪರವಾಗಿ ಮತ ಚಲಾಯಿಸುವ ನಿರೀಕ್ಷೆಯಿದೆ.
ಮೀಸಲಾತಿ ಬಗ್ಗೆ ಆರೆಸ್ಸೆಸ್ ಹೇಳಿಕೆಯಿಂದ ಪ್ರತಿಕೂಲ ಪರಿಣಾಮ: ಕಳೆದ ತಿಂಗಳು ಆರೆಸ್ಸೆಸ್ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ಹೇಳಿಕೆಯೊಂದನ್ನು ನೀಡಿ ತಾವು ಮೀಸಲಾತಿ ಪುನರ್ ಪರಿಶೀಲನೆಯ ಪರವಾಗಿರುವುದಾಗಿ ಹೇಳಿದ್ದರು.ಆದರೆ ಈ ಹೇಳಿಕೆಯಿಂದ ಹಿಂದೆ ಸರಿದು ನಂತರ ಅವರು ಸ್ಪಷ್ಟೀಕರಣ ನೀಡಿದರೂ ಅವರ ಹೇಳಿಕೆ ಅದಾಗಲೇ ಹಾನಿಯುಂಟು ಮಾಡಿತ್ತು. ಇದರಿಂದ ಬಿಜೆಪಿಯು ಯಾದವೇತರ ಇತರ ಹಿಂದುಳಿದ ವರ್ಗಗಳು ಹಾಗೂ ಜಾಟವರಲ್ಲದ ದಲಿತರ ಮತಗಳನ್ನು ಬಹುತೇಕ ಕಳೆದುಕೊಂಡಂತೆಯೇ ಆಗಿದೆ. ಅವರು ಅಖಿಲೇಶ್ ಅಥವಾ ಮಾಯಾವತಿ ಪಕ್ಷಕ್ಕೆ ಮತ ಹಾಕುವ ಸಂಭವವೇ ಹೆಚ್ಚು.
ಅಮಾನ್ಯೀಕರಣದ ಪ್ರಭಾವ: ನೋಟು ಅಮಾನ್ಯೀಕರಣವುಆರ್ಥಿಕತೆಯ ಮೇಲೆ ಹೊಡೆತ ನೀಡಿದೆ ಎಂಬುದನ್ನು ಜನಸಾಮಾನ್ಯರು ಅರಿತಿದ್ದಾರೆ. ನಿರುದ್ಯೋಗ ಹೆಚ್ಚಾಗಿದ್ದು ಹಲವಾರು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ದೊರಕುತ್ತಿಲ್ಲ. ಮೇಲಾಗಿ ಬಿಜೆಪಿ ನಾಯಕರು ಕೂಡ ನೋಟು ರದ್ದತಿಯ ವಿಚಾರವನ್ನು ತಮ್ಮ ಭಾಷಣಗಳಿಂದ ಬಹುತೇಕ ಹೊರಗಿಡಬಯಸಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಅವರು ತಮ್ಮ ಭಾಷಣದಲ್ಲಿ ‘ಆಪ್ ಕೊ ಕ್ಯಾ ಮಿಲಾ?’’ ಎಂದು ಪ್ರಶ್ನಿಸುತ್ತಿರುವುದು ಜನರ ಮನಸ್ಸಿಗೆ ನಾಟುತ್ತಿದೆ. ಬಿಜೆಪಿ ಉತ್ತರ ಪ್ರದೇಶ ರೈತರಿಗೆ ಮೂರು ತಿಂಗಳೊಳಗಾಗಿ ರೂ 6,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದರೂ ಅದು ಪರಿಣಾಮ ಬೀರುವುದು ಅಸಾಧ್ಯ.
ಕೃಪೆ: timesofindia.indiatimes.com







