ನಾಯಿಗಳ ಸಂಸ್ಕೃತಿಯಿಂದ ಬೆಳೆದು ಬಂದಿಲ್ಲ: ಮೋದಿ

ಹೊಸದಿಲ್ಲಿ, ಫೆ.7:ನಾಯಿಗಳ ಸಂಸ್ಕೃತಿಯಿಂದ ನಾವು ಬೆಳೆದಿಲ್ಲ. ನಾವು ನಾಯಿಗಳ ರೀತಿಯ ಪರಂಪರೆಯಲ್ಲಿ ಬೆಳೆದಿಲ್ಲ . ದೇಶ ಮುನ್ನಡೆಸುವ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಹೇಳಿಕೆಗೆ ಇಂದು ಲೋಕಸಭೆಯಲ್ಲಿ ತಿರುಗೇಟು ನೀಡಿದರು.
ಬಿಜೆಪಿಯಿಂದ ಒಂದು ನಾಯಿಯಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದೆಯೇ ಎಂಬ ಖರ್ಗೆ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಒಂದು ಕುಟುಂಬದಿಂದ ಬಂದಿಲ್ಲ. ಅನೇಕರ ತ್ಯಾಗ ಬಲಿದಾನದಿಂದ ಬಂದಿದೆ. ಆದರೆ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ಒಂದು ಕುಟುಂಬಕ್ಕೆ ಋಣಿಯಾಗಿರಬೇಕಿದೆಂದು ಹೇಳಿದೆ. ಕಾಂಗ್ರೆಸ್ ಪಕ್ಷ 1975 ರಲ್ಲಿ ಒಂದು ಕುಟುಂಬಕ್ಕಾಗಿ ಪ್ರಜಾಪ್ರಭುತ್ವವವನ್ನು ಅಡವಿಟ್ಟಿತ್ತು. ಈ ಮೂಲಕ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಚುನಾವಣೆಯ ಚಿಂತೆ. ಬಡವರ ಬಡವರ ಬಗ್ಗೆ ಕಾಳಜಿ ಇಲ್ಲ. 1988ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬೇನಾಮಿ ಆಸ್ತಿಯ ಕುರಿತು ಕಾನೂನು ತರಲಾಗಿತ್ತು.ಆಗ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಆ ಕಾನೂನು ಈ ತನಕ ಜಾರಿಯಾಗಿಲ್ಲ ಎಂದರು.
ಸಾಲ ಮಾಡಿದವರು ಸಾಲ ಮರಳಿಸಬೇಕಾಗುತ್ತದೆ ಎಂದು ಕಪ್ಪುಕುಳಗಳನ್ನು ಎಚ್ಚರಿಸಿದ ಪ್ರಧಾನಿ ಮೋದಿ ಅವರು ನಾವು ಬಡವರ ಪರವಾಗಿ ಹೋರಾಟ ಮಾಡುತ್ತೇವೆ. ಬಡವರ ಪೈಸೆ ಅವರಿಗೆ ತಲುಪುವ ತನಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ನೋಟು ಬ್ಯಾನ್ ಬಗ್ಗೆ ಚರ್ಚೆಗೆ ಸಿದ್ದವಿದ್ದರೂ, ವಿಪಕ್ಷಗಳು ನಮಗೆ ಒಂದು ದಿನವೂ ಚರ್ಚೆಗೆ ಅವಕಾಶ ನೀಡಿಲ್ಲ. ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಮೋದಿಯನ್ನೇ ವಿರೋಧಿಸುವುದು ವಿಪಕ್ಷದ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷ ಮನೆಗ್ರಾ ಯೋಜನೆಯ ನಿಯಮವನ್ನು 1035 ಸಲ ಬದಲಾಯಿಸಿತು.ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 10.83 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ನಮ್ಮ ಅವಧಿಯಲ್ಲಿ 22.27 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
ನಮ್ಮ ಸರಕಾರ ಯೋಜನೆಗಳಿಂದ ಸರಕಾರದ ಖಜಾನೆ ಭರ್ತಿಯಾಗಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚೆಯಾಗಬೇಕು. 2014ರ ಚುನಾವಣೆಯಲ್ಲಿ 4 ಸಾವಿರ ಕೋಟಿ ರೂ. ಖರ್ಚಾಗಿದೆ ಎಂದು ಮೋದಿ ಹೇಳಿದರು.







