ಕಾಬಾ ಬಳಿ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ವ್ಯಕ್ತಿ
ವೈರಲ್ ವೀಡಿಯೊ

ಮನಾಮ, ಫೆ. 7: ಕಾಬಾದ ಪಕ್ಕದಿಂದ ಸೋಮವಾರ ಸಂಜೆ ತಾವು ಬಂಧಿಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಾಗೂ ಈಗಾಗಲೇ ವರದಿಯಾಗಿರುವಂತೆ ಕಾಬಾಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರಲಿಲ್ಲ ಎಂದು ಮಕ್ಕಾದ ಮಸ್ಜಿದುಲ್ ಹರಂನ ಭದ್ರತಾ ಪಡೆಗಳು ಹೇಳಿವೆ.
ಸುಮಾರು 40ರ ಹರಯದ ವ್ಯಕ್ತಿಯನ್ನು ಸೌದಿ ರಾಷ್ಟ್ರೀಯ ಎಂದು ಗುರುತಿಸಲಾಗಿದ್ದು, ತನ್ನ ಮೇಲೆ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂದು ಭದ್ರತಾ ಪಡೆಗಳ ವಕ್ತಾರ ಮೇಜರ್ ಸಮೇಹ್ ಅಲ್ ಸಲ್ಮಿ ತಿಳಿಸಿದರು.
‘‘ತನಗೆ ತಾನು ಬೆಂಕಿ ಹಚ್ಚಲು ಯತ್ನಿಸುವ ಮುನ್ನವೇ ಆತನನ್ನು ಬಂಧಿಸಲಾಗಿದೆ. ಆತ ಮಾನಸಿಕ ಅಸ್ವಸ್ಥ ಎಂಬುದನ್ನು ಆತನ ವರ್ತನೆ ಸೂಚಿಸುತ್ತದೆ. ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’’ ಎಂದು ವಕ್ತಾರರು ಹೇಳಿರುವುದಾಗಿ ಸೌದಿ ಅರೇಬಿಯ ಸುದ್ದಿ ವೆಬ್‌ಸೈಟ್ ‘ಸಬ್ಕ್’ ವರದಿ ಮಾಡಿದೆ.
ಕಾಬಾದ ಮೇಲೆ ಪೆಟ್ರೋಲ್ ಸುರಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ತಾನು ನೋಡಿದ್ದೇನೆ ಎಂದು ಸೌದಿ ವ್ಯಕ್ತಿಯೊಬ್ಬ ಹೇಳಿದ್ದಾಗಿ ಹಿಂದಿನ ವರದಿಗಳು ಹೇಳಿದ್ದವು.
‘‘ಸೋಮವಾರ ರಾತ್ರಿ ಸುಮಾರು 11:40ಕ್ಕೆ ನಾನು ಕಾಬಾಕ್ಕೆ ಪ್ರದಕ್ಷಿಣೆ ಬರುತ್ತಿದ್ದಾಗ ವ್ಯಕ್ತಿಯೊಬ್ಬ ಕಾಬಾದ ಮೇಲೆ ಬಾಟಲಿಯಿಂದ ಪೆಟ್ರೋಲ್ ಸುರಿಯುತ್ತಿದ್ದುದನ್ನು ನೋಡಿದೆ’’ ಎಂದು ಘಾಝಿ ದರ್ವೀಶ್ ಹೇಳಿದರು.
‘‘ನಾನು ಆತನನ್ನು ತಕ್ಷಣ ಹಿಡಿದುಕೊಂಡೆ ಹಾಗೂ ನನ್ನ ಸುತ್ತಲಿದ್ದ ಜನರ ನೆರವು ಕೋರಿದೆ. ಭದ್ರತಾ ಸಿಬ್ಬಂದಿ ಧಾವಿಸಿ ಬಂದು ಆತನನ್ನು ಒಯ್ದರು’’ ಎಂದರು.







