ಒಳಚರಂಡಿ ಕಾಮಗಾರಿಗೆ 77 ಕೋಟಿ ರೂ. ಅನುದಾನ ಮಂಜೂರು: ವೈ.ಎಸ್.ವಿ. ದತ್ತಾ

ಕಡೂರು, ಫೆ.7: ಪುರಸಭೆಯಲ್ಲಿ ಕಳೆದ 30 ತಿಂಗಳಿನ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಾಲೆಳೆಯುವ ಸಂಸ್ಕೃತಿ ಇರುವುದರಿಂದ . ಬೀರೂರು ಪುರಸಭೆಯಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿ ಮುಗಿದಿದೆ. ಕಡೂರು ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ 77 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತಾ ತಿಳಿಸಿದರು.
ಅವರು ಪಟ್ಟಣದ 5, 7, 8ನೇ ವಾರ್ಡ್‌ಗಳಿಗೆ ಭದ್ರಾ ಯೋಜನೆಯ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಪುರಸಭೆಯಲ್ಲಿ ಅನುದಾನಕ್ಕೆ ಕೊರತೆಯಿಲ್ಲ. ಈಗಾಗಲೇ 13 ಕೋಟಿ ರೂ.ಗಳ ಅನುದಾನ ಕೊಳೆಯುತ್ತಾ ಬಿದ್ದಿದೆ. ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಚರಂಡಿಗಳು ಸಮರ್ಪಕವಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಜೈನ್ ಟೆಂಪಲ್ ರಸ್ತೆ ಸಂಪೂರ್ಣ ಹಾಳಾಗಿದೆ. ಕೆಎಂ ರಸ್ತೆಯಲ್ಲಿ ವಾಹನಗಳು ಓಡಾಡುವಂತಿಲ್ಲ ಎಂದು ಹೇಳಿದರು.
ಎಸ್.ಫ್.ಸಿ. ಯೋಜನೆಯಡಿ 41 ಲಕ್ಷ ರೂ. ಮಂಜೂರಾಗಿದೆ. ಈ ಹಣದಲ್ಲಿ ಕಾಮಗಾರಿ ನಡೆಯಲಿದೆ. ಇನ್ನು ಮುಂದೆ ಪುರಸಭೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪ್ರಾರಂಭ ಆಗಲಿವೆ. ಮಾಜಿ ಶಾಸಕರುಗಳಾದ ದಿವಂಗತ ಕೆ.ಎಂ. ತಮ್ಮಯ್ಯ, ಓಂಕಾರಮೂರ್ತಿ, ಎಂ. ವೀರಭದ್ರಪ್ಪ ಇವರುಗಳ ಹೆಸರಿನ ಬಡಾವಣೆಗಳಲ್ಲಿ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ತಕ್ಷಣಕ್ಕೆ ತಮ್ಮಯ್ಯ ಬಡಾವಣೆಗೆ 2 ಬೋರ್‌ವೆಲ್‌ಗಳನ್ನು ಕೊರೆಸಲಾಗುವುದು. ನಗರೋತ್ಥಾನ ಯೋಜನೆಯಡಿಯಲ್ಲಿ 7.50 ಕೋಟಿ ರೂ. ಮಂಜೂರಾಗಿದೆ ಎಂದರು.
ಕನಕವೃತ್ತದಿಂದ ಎಮ್ಮೆದೊಡ್ಡಿ ರಸ್ತೆ ಕ್ರಾಸ್‌ವರೆಗೆ ರಸ್ತೆ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣತನ ರಾಜಕಾರಣ ಮಾಡುವುದಿಲ್ಲ. ಕಡೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಿರುತ್ತಾರೆ. ಕಾಂಗ್ರೆಸ್ ನಾಯಕರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಹೆಚ್ಚಿನ ಅನುದಾನವನ್ನು ಕಡೂರು ಪಟ್ಟಣಕ್ಕೆ ತರಬಹುದಿತ್ತು. ವೈ.ಸಿ.ವಿಶ್ವನಾಥ್ ಮನೆಯಿಂದ ಚೆಕ್‌ಪೋಸ್ಟ್‌ವರೆಗೆ ಜೋಡಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ನೀಡಿದ್ದಾರೆ ಎಂದು ಹೇಳಿದರು.
ಪುರಸಭಾ ಅಧ್ಯಕ್ಷ ಎಂ. ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜೇಶ್, ಸ್ಥಾಯಿಸಮಿತಿ ಅಧ್ಯಕ್ಷ ಎನ್. ಬಷೀರ್‌ಸಾಬ್, ಎ.ಪಿ.ಎಂ.ಸಿ. ನಿರ್ದೇಶಕ ಕೆ.ಎಚ್. ಲಕ್ಕಣ್ಣ, ಮಾಜಿ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಪುರಸಭಾ ಸದಸ್ಯರಾದ ರೇಣುಕಾರಾಧ್ಯ, ಮಂಜುನಾಥ್, ಇಕ್ಬಾಲ್, ಅಣ್ಣಾದೊರೆ, ಖಾದರ್, ಕೆ.ಜಿ.ಲೋಕೇಶ್, ಮುಖ್ಯಾಧಿಕಾರಿ ಮಂಜುನಾಥ್, ಜೆಡಿಎಸ್ ಅಧ್ಕಕ್ಷ ಕೆ.ಎಂ.ಮಹೇಶ್ವರಪ್ಪ, ಎನ್.ಇಮಾಮ್ ಉಪಸ್ಥಿತರಿದ್ದರು.







