ಚಿನ್ನ ಕಳವು: ಆರೋಪಿಯ ಬಂಧನ
ಸುಳ್ಯ, ಫೆ. 7: ಅಮರಮುಡ್ನೂರು ಗ್ರಾಮದ ಮುಂಡೋಕಜೆ ಮನೆಯೊಂದರಲ್ಲಿ ನಡೆದ ಚಿನ್ನ ಕಳವು ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಬೇಧಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಅಮರಮುಡ್ನೂರು ಗ್ರಾಮದ ಮುಂಡೋಕಜೆ ಚಂದ್ರಶೇಖರ ಎಂಬವರ ಮನೆಯಿಂದ ಜನವರಿ 28ರಂದು ಕಿವಿಯ ಬೆಂಡೋಲೆ, ಕ್ಯಾಮಾರ, ಪೆನ್‌ಡ್ರೈವ್, ರೂ.6000ವನ್ನು ಯಾರೋ ಕಳ್ಳರು ಬಂದು ಕಳವುಗೈದಿದ್ದರು. ಈ ಕುರಿತು ಚಂದ್ರಶೇಖರರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಬೆಳ್ಳಾರೆ ಪೋಲೀಸರು ತಮಗೆ ಬಂದ ಮಾಹಿತಿಯ ಮೇರೆಗೆ ಅದೇ ಪರಿಸರದ ಮಹೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕಳವು ಮಾಡಿದನ್ನು ಒಪ್ಪಿಕೊಂಡನೆನ್ನಲಾಗಿದೆ.
ಅಲ್ಲದೆ ಕಳ್ಳತನ ಮಾಡಿದ್ದ ಚಿನ್ನದ ಬೆಂಡೋಲೆಯನ್ನು ಬೆಳ್ಳಾರೆ ಮುತ್ತೂಟು ಫೈನಾನ್ಸ್‌ನಲ್ಲಿ ಅಡವಿರಿಸಿದ್ದು ಹಾಗೂ ಕ್ಯಾಮಾರ ಪೆನ್‌ಡ್ರೈವ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಯ್ಯ, ಬೆಳ್ಳಾರೆ ಎಸ್.ಐ ಚೆಲುವಯ್ಯ, ಸಿಬ್ಬಂದಿ ದೇವರಾಜ್ ಬಾಲಕೃಷ್ಣ, ಉಮೇಶ್, ಪ್ರವೀಣ್, ಸಂತೋಷ್, ನವೀನ್, ಜಗದೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





