‘ಖಾಕಿ’ ಸರ್ಪಗಾವಲಿನಲ್ಲಿ ಸಹ್ಯಾದ್ರಿ ಕಾಲೇಜು ಪುನಾರಂಭ
ಕೇಸರಿ ಶಾಲು - ಬುರ್ಖಾ ವಿವಾದ

ಶಿವಮೊಗ್ಗ, ಫೆ. 7: ಸಮವಸ್ತ್ರ ಧರಿಸುವುದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಹಾಗೂ ಕ್ಯಾಂಪಸ್ ಆವರಣದಲ್ಲಿ ಮನೆಮಾಡಿದ್ದ ಉದ್ವಿಗ್ನ ಪರಿಸ್ಥಿತಿ ತಹಬದಿಗೆ ಬಂದಿದೆೆ. ವಿವಾದದ ಹಿನ್ನೆಲೆಯಲ್ಲಿ ಶನಿವಾರದಿಂದ ಕಾಲೇಜಿಗೆ ರಜೆ ಕೂಡ ಘೋಷಿಸಲಾಗಿತ್ತು. ಪ್ರಸ್ತುತ ಪರಿಸ್ಥಿತಿ ತಹಬದಿಗೆ ಬಂದಿರುವುದರಿಂದ ಬಿಗಿ ಪೊಲೀಸ್ ಪಹರೆಯಲ್ಲಿ ಮಂಗಳವಾರದಿಂದ ತರಗತಿಗಳನ್ನು ಪುನಾರಂಭಿಸಲಾಗಿದೆ.
ಭಾರೀ ಸಂಖ್ಯೆಯ ಪೊಲೀಸರು ಹಾಗೂ ಅವರಿಗೆ ಸಂಬಂಧಿಸಿದ ವಾಹನಗಳು ಕಾಲೇಜು ಆವರಣ ಹಾಗೂ ಹೊರಭಾಗದಲ್ಲಿ ಬೀಡುಬಿಟ್ಟಿದ್ದು ಕಂಡುಬಂದಿತು. ಕಾಲೇಜು ಪ್ರವೇಶ ದ್ವಾರದ ಗೇಟ್ ಬಳಿ ಪೊಲೀಸರು ಪ್ರತಿಯೋರ್ವ ವಿದ್ಯಾರ್ಥಿಯನ್ನು ತಪಾಸಣೆಗೊಳಪಡಿಸಿ ಒಳಗೆ ಬಿಡುತ್ತಿದ್ದರು. ಗುರುತು ಚೀಟಿ (ಐ.ಡಿ. ಕಾರ್ಡ್) ಹೊಂದಿದ್ದ ವಿದ್ಯಾರ್ಥಿಗಳನ್ನು ಮಾತ್ರ ಪೊಲೀಸರು ಕಾಲೇಜು ಒಳಗೆ ಬಿಡುತ್ತಿದ್ದುದು ಕಂಡುಬಂದಿತು.
ಕಾಲೇಜು ಆವರಣದಲ್ಲಿ ಕಂಡುಬಂದ ಖಾಕಿ ಸರ್ಪಗಾವಲು ಕೆಲ ವಿದ್ಯಾರ್ಥಿ - ವಿದ್ಯಾರ್ಥಿನಿಯರಲ್ಲಿ ಭಯಮಿಶ್ರಿತ ಅನುಭವ ಉಂಟು ಮಾಡಿತು. ಪೋಷಕರಲ್ಲಿಯೂ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿತ್ತು. ಇತ್ತೀಚೆಗೆ ಕ್ಯಾಂಪಸ್ ಆವರಣದಲ್ಲಿ ನಡೆದ ಅಹಿತಕರ ಘಟನೆ, ಖಾಕಿ ಸರ್ಪಗಾವಲಿನ ಪರಿಣಾಮದಿಂದ ಇತರ ದಿನಗಳಿಗೆ ಹೋಲಿಕೆ ಮಾಡಿದರೆ ಮಂಗಳವಾರ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಕಡಿಮೆ ಇರುವುದು ಕಂಡುಬಂದಿತು.
ಕಾಲೇಜ್ ಕಟ್ಟಡದಲ್ಲಿ ವಿವಿಧ ಚುನಾವಣೆಗಳ ಮತ ಎಣಿಕೆ ಸಂದರ್ಭದಲ್ಲಿ ಈ ರೀತಿಯ ಪೊಲೀಸ್ ಪಹರೆ ಗಮನಿಸಿದ್ದೆ. ಉಳಿದಂತೆ ತಮಗೆ ಗೊತ್ತಿರುವಂತೆ ಕಾಲೇಜ್‌ನ ಇತಿಹಾಸದಲ್ಲಿಯೇ ಈ ಪ್ರಮಾಣದ ಪೊಲೀಸ್ ಭದ್ರತೆ ಹಾಕಿದ್ದನ್ನು ಕೇಳಿಲ್ಲ. ತಮ್ಮ ಕರ್ತವ್ಯದ ಅವಧಿಯಲ್ಲಿಯೂ ನೋಡಿಲ್ಲ. ನಿಜಕ್ಕೂ ಶಿಕ್ಷಣ ಕೇಂದ್ರಗಳಲ್ಲಿ ಈ ರೀತಿಯ ಪರಿಸ್ಥಿತಿ ಸೃಷ್ಟಿಯಾಗಬಾರದು. ಪ್ರಸ್ತುತ ಕಾಲೇಜ್‌ನಲ್ಲಿ ಮನೆ ಮಾಡಿರುವ ಗೊಂದಲವು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ.
ಹೆಸರು ಬಹಿರಂಗಪಡಿಸಲಿಚ್ಛಿಸದ ಕಾಲೇಜಿನ ಉಪನ್ಯಾಸಕ
ಕಾಲೇಜುಗಳು ಹಾಗೂ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಧರ್ಮ, ಜಾತಿ, ಭಾಷೆ, ವರ್ಣ ಭೇದಗಳಿಂದ ಮುಕ್ತವಾಗಬೇಕು. ಕಾಲೇಜಿನಲ್ಲಿದ್ದಾಗ ವಿದ್ಯಾರ್ಥಿ ಎಂಬುವುದೇ ನಮ್ಮ ಜಾತಿ ಎಂಬ ಮನೋಭಾವ ಅವರಲ್ಲಿರಬೇಕು. ಹಾಗೆಯೇ ಶಿಕ್ಷಣ ಕೇಂದ್ರಗಳು ರಾಜಕೀಯ-ಮತಾಂಧ ಚಟುವಟಿಕೆಗಳಿಂದ ದೂರ ಉಳಿಯಬೇಕು.
ಆದರೆ, ಇತ್ತೀಚೆಗೆ ಶಿಕ್ಷಣ ಕೇಂದ್ರಗಳಿಗೂ ರಾಜಕೀಯ, ಧರ್ಮ ಕಾಲಿಟ್ಟಿದೆ. ಇತ್ತೀಚೆಗೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿಭೂತವಾಗಿದೆ. ಈ ರೀತಿಯ ಘಟನೆಗಳು ಯಾವುದೇ ಕಾಲೇಜಿನಲ್ಲಿಯೂ ನಡೆಯಬಾರದು.







