ಟಿ20 ಯಲ್ಲಿ ತ್ರಿಶತಕದ ವಿಶ್ವ ದಾಖಲೆ ಬರೆದ ಮೋಹಿತ್

ಹೊಸದಿಲ್ಲಿ, ಫೆ.7: ದಿಲ್ಲಿಯ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ತ್ರಿಶತಕ ದಾಖಲಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
ದಿಲ್ಲಿಯ ಲಲಿತ್ ಪಾರ್ಕ್‌ನಲ್ಲಿ ನಡೆದ ಫ್ರೆಂಡ್ಸ್ ಇಲೆವೆನ್ ವಿರುದ್ಧದ ಫ್ರೆಂಡ್ಸ್ ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಮಾವಿ ಇಲೆವೆನ್ ತಂಡದ 21ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೋಹಿತ್ ಅವರು 72 ಎಸೆತಗಳಲ್ಲಿ 300 ರನ್ ಗಳಿಸಿದರು.
39 ಸಿಕ್ಸರ್ ಹಾಗೂ 14 ಬೌಂಡರಿಗಳ ಸಹಾಯದಿಂದ ತ್ರಿಶತಕ ಪೂರ್ಣಗೊಳಿಸಿದರು.
18 ಓವರ್‌ಗಳ ಮುಕ್ತಾಯಕ್ಕೆ ಮೋಹಿತ್ ಸ್ಕೋರ್ 250ಕ್ಕೆ ತಲುಪಿತ್ತು. ಮತ್ತೆ ಎರಡು ಓವರ್‌ಗಳಲ್ಲಿ 50 ರನ್ ಸೇರಿಸಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 35 ರನ್ ಗಳಿಸಿದರು. ಕೊನೆಯ ಐದು ಎಸೆತಗಳಲ್ಲಿ ಸತತ 5 ಸಿಕ್ಸರ್ ಸಿಡಿಸಿದರು.
ಮೋಹಿತ್ ಅವರ ತ್ರಿಶತಕದ ನೆರವಿನಲ್ಲಿ ಅವರ ತಂಡ ನಿಗದಿತ 20 ಓವರ್‌ಗಳಲ್ಲಿ 416 ರನ್ ಗಳಿಸಿತ್ತು. ಬಲಗೈ ದಾಂಡಿಗ ಈ ವರೆಗೆ ಆಡಿರುವ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದರು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ದಿಲ್ಲಿ ಪರ 2015ರಲ್ಲಿ ಪಾದಾರ್ಪಣೆಗೈದಿದ್ದರು.
ಮೋಹಿತ್ ಅವರನ್ನು ಹೊರತುಪಡಿಸಿದರೆ ಅವರ ತಂಡದ ಗೌರವ್ 86 ರನ್ ಗಳಿಸಿದರು. ಈ ಪಂದ್ಯದಲ್ಲಿ ಮಾವಿ ತಂಡ 216 ರನ್‌ಗಳ ಜಯ ಗಳಿಸಿದೆ.
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಇದು ಈ ವರೆಗೆ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. 2013ರಲ್ಲಿ ಐಪಿಎಲ್ ಆರ್‌ಸಿಬಿ ಆಟಗಾರ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಅವರು ಔಟಾಗದೆ 175 ರನ್ ದಾಖಲಿಸಿದ್ದರು. ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಅವರು ಇಂಗ್ಲೆಂಡ್ ವಿರುದ್ಧ 2013ರಲ್ಲಿ ನಡೆದ ಪಂದ್ಯದಲ್ಲಿ 156 ಗಳಿಸಿರುವುದು ದಾಖಲೆಯಾಗಿದೆ.
ಶ್ರೀಲಂಕಾದ ಧನುಕ್ ಪಾಥಿರಣ ಅವರು ಇಂಗ್ಲೆಂಡ್‌ನ ಲ್ಯಾಂಕಾಶೈರ್ ಸ್ಥಳೀಯ ಟಿ20 ಲೀಗ್‌ನಲ್ಲಿ 29 ಸಿಕ್ಸರ್ ಮತ್ತು 18 ಬೌಂಡರಿಗಳಿರುವ 277 ರನ್ ಸಿಡಿಸಿದ್ದರು.
,,,,,,,,,,,





