ಮಧ್ವ ಸಪ್ತ ಶತಮಾನೋತ್ಸವ ಸಮಾರೋಪ

ಉಡುಪಿ, ಫೆ.7: ಭಾರತದಲ್ಲಿ ಮಧ್ವಾಚಾರ್ಯರು ಹುಟ್ಟುವುದಕ್ಕೆ ಮೊದಲು ದೇಶದಲ್ಲಿ 21ಮತಾಚಾರ್ಯರು ಬಂದು ಹೋಗಿದ್ದಾರೆ.ಆದರೆ ಭಗವಂತ, ಪ್ರಪಂಚದ ವಿಚಾರದಲ್ಲಿ ಅವರೆಲ್ಲ ಬಿಟ್ಟು ಹೋದ ಅಸಂಖ್ಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದು ಮಾತ್ರವಲ್ಲ ಇಂದು ಅತ್ಯಂತ ವೈಜ್ಞಾನಿಕವಾದ ರೀತಿಯಲ್ಲಿ ದ್ವೈತ ಸಿದ್ಧಾಂತವನ್ನು ಮಂಡಿಸಿ ಶ್ರೇಷ್ಠ ದಾರ್ಶನಿಕರೆನಿಸಿದವರು ಮಧ್ವಾಚಾರ್ಯರು ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರತಿಪಾದಿಸಿದ್ದಾರೆ.
ಮಧ್ವ ಸಪ್ತ ಶತಮಾನೋತ್ಸವ ಹಾಗೂ ಶ್ರೀಮನ್ನ್ಯಾಯ ಸುಧಾ ಮಂಗಲೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅವರು ಸಂದೇಶ ನೀಡಿದರು.
ಮಂತ್ರಾಲಯ ಮಠಾಧೀಶ ಶ್ರೀಸುಬುಧೇಂದ್ರತೀರ್ಥ ಹಾಗೂ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಂದೇಶ ನೀಡಿದರು. ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಬನ್ನಂಜೆ ಶ್ರೀಗಳು, ಮಠದ ದಿವಾನ ಎಂ.ರಘುರಾಮಾಚಾರ್ಯ ಉಪಸ್ಥಿತರಿದ್ದರು.
ವಿದ್ವಾಂಸರಾದ ವ್ಯಾಸನಕೆರೆ ಪ್ರಭಂಜನಾಚಾರ್ಯ, ರಾಜಾ ಎಸ್ ಗಿರಿ ಆಚಾರ್ಯ, ವಾದಿರಾಜಾಚಾರ್ಯರು ಉಪನ್ಯಾಸ ನೀಡಿದರು. ಬದರೀನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.





