ಫೆಲೆಸ್ತೀನಿಯರ ಜಮೀನು ಕದಿಯುತ್ತಿರುವ ಇಸ್ರೇಲ್: ಅರಬ್ ಲೀಗ್
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮನೆಗಳನ್ನು ಮಾನ್ಯಮಾಡುವ ಕಾನೂನಿಗೆ ಇಸ್ರೇಲ್ ಅನುಮೋದನೆ

ಕೈರೋ, ಫೆ. 7: ಇಸ್ರೇಲ್ ಫೆಲೆಸ್ತೀನೀಯರ ಜಾಗವನ್ನು ಕದಿಯುತ್ತಿದೆ ಎಂದು ಅರಬ್ ಲೀಗ್ ಮಂಗಳವಾರ ಆರೋಪಿಸಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಯಹೂದಿಯರ ಡಝನ್‌ಗಟ್ಟಳೆ ಕಾಲನಿಗಳನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಇಸ್ರೇಲ್ ಸಂಸತ್ತು ಅಂಗೀಕರಿಸಿದ ಬಳಿಕ ಲೀಗ್ ಈ ಪ್ರತಿಕ್ರಿಯೆ ನೀಡಿದೆ.
‘‘ಫೆಲೆಸ್ತೀನೀಯರ ಆಸ್ತಿಯನ್ನು ಕಬಳಿಸುವುದಕ್ಕಾಗಿ ಈ ಕಾನೂನನ್ನು ಮಾಡಲಾಗಿದೆ’’ ಎಂದು ಕೈರೋದಲ್ಲಿ ನೆಲೆ ಹೊಂದಿರುವ ಅರಬ್ ಲೀಗ್‌ನ ಮುಖ್ಯಸ್ಥ ಅಹ್ಮದ್ ಅಬುಲ್ ೇಟ್ ಹೇಳಿದರು.
ಖಾಸಗಿ ಆಸ್ತಿಯೆಂದು ಗೊತ್ತಿಲ್ಲದೆ ಅಥವಾ ಸರಕಾರ ಅನುಮತಿ ನೀಡಿರುವ ಕಾರಣಕ್ಕಾಗಿ ಫೆಲೆಸ್ತೀನೀಯರ ಖಾಸಗಿ ಜಮೀನುಗಳಲ್ಲಿ ಇಸ್ರೇಲಿಯರು ಮನೆಗಳನ್ನು ಕಟ್ಟಿದ್ದರೆ, ಆ ಜಮೀನುಗಳನ್ನು ಕಾನೂನುಬದ್ಧವಾಗಿ ವಶಪಡಿಸಿಕೊಳ್ಳಲು ಇಸ್ರೇಲ್‌ಗೆ ಈ ಕಾನೂನು ಅವಕಾಶ ಮಾಡಿಕೊಡುತ್ತದೆ.
ಇಂಥ ಪ್ರಕರಣಗಳಲ್ಲಿ ಜಮೀನುಗಳ ಫೆಲೆಸ್ತೀನ್ ಮಾಲೀಕರಿಗೆ ಆರ್ಥಿಕ ಪರಿಹಾರ ನೀಡಲಾಗುವುದು ಅಥವಾ ಬೇರೆ ಜಮೀನು ನೀಡಲಾಗುವುದು.
ಈ ಕಾನೂನು, ಸ್ವತಂತ್ರ ಫೆಲೆಸ್ತೀನ್ ದೇಶದ ಸ್ಥಾಪನೆ ಮತ್ತು ಎರಡು ದೇಶ ಪರಿಹಾರದ ಸಾಧ್ಯತೆಯನ್ನು ನಾಶಪಡಿಸುವ ಉದ್ದೇಶದ ಇಸ್ರೇಲ್ ನೀತಿಗಳ ಮುಂದುವರಿದ ಭಾಗವಾಗಿದೆ ಎಂದು ಅಬುಲ್ ೇಟ್ ಅಭಿಪ್ರಾಯಪಟ್ಟರು.
ಜೋರ್ಡಾನ್ ಖಂಡನೆ: ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಕೆಲವೇ ಕೆಲವು ಅರಬ್ ದೇಶಗಳ ಪೈಕಿ ಒಂದಾಗಿರುವ ಜೋರ್ಡಾನ್ ಕೂಡ ಇಸ್ರೇಲ್‌ನ ಈ ಕಾನೂನನ್ನು ಖಂಡಿಸಿದೆ. ‘‘ಇದು ಪ್ರಚೋದನಕಾರಿ ಕಾನೂನಾಗಿದ್ದು, ಎರಡು-ದೇಶ ಪರಿಹಾರದ ಯಾವುದೇ ಭರವಸೆಯನ್ನು ಹೊಸಕಿಹಾಕುವ ಉದ್ದೇಶ ಹೊಂದಿದೆ’’ ಎಂದಿದೆ.
ಟರ್ಕಿ ಖಂಡನೆ
ಫೆಲೆಸ್ತೀನ್‌ನ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗರು ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಕಾನೂನುಬದ್ಧಗೊಳಿಸಲು ಇಸ್ರೇಲ್ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಟರ್ಕಿ ಖಂಡಿಸಿದೆ.
‘‘ಫೆಲೆಸ್ತೀನೀಯರ ಖಾಸಗಿ ಜಮೀನಿನಲ್ಲಿ ನಿರ್ಮಿಸಲಾಗಿರುವ 4,000ಕ್ಕೂ ಅಧಿಕ ಮನೆಗಳನ್ನು ಕಾನೂನುಬದ್ಧಗೊಳಿಸುವ ಇಸ್ರೇಲ್ ಸಂಸತ್ತಿನ ನಿರ್ಣಯವನ್ನು ನಾವು ಬಲವಾಗಿ ಖಂಡಿಸುತ್ತೇವೆ’’ ಎಂದು ಟರ್ಕಿಯ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.







