ಬಗೆ ಹರಿಯದ ರಸ್ತೆ ಸಮಸ್ಯೆ: ಮುಚ್ಚಿದ ಊಟಿ ಚಿನ್ನದಗಣಿ

ಹಟ್ಟಿ ಚಿನ್ನದಗಣಿ: ಸ್ಥಳೀಯ ಚಿನ್ನದಗಣಿ ಕಂಪನಿ ವ್ಯಾಪ್ತಿಗೆ ಒಳಪಟ್ಟ ದೇವದುರ್ಗ ತಾಲೂಕಿನ ಊಟಿ ಚಿನ್ನದಗಣಿ ಕಂಪನಿಗೆ ಸಂಪರ್ಕ ರಸ್ತೆ ವಿವಾದ ಬಗೆಹರಿಯದಿದ್ದರಿಂದ ಅಲ್ಲಿಯ ನೌಕರರ ವೇತನ, ಇತರ ವೆಚ್ಚಗಳು ಹಟ್ಟಿಗಣಿ ಮೇಲೆ ಬೀಳುತ್ತಿದ್ದರಿಂದ ಆ ನೌಕರರನ್ನು ಬೇರೆಡೆ ವರ್ಗಾವಣೆಮಾಡಿ ಊಟಿ ಗಣಿಯನ್ನು ಸೋಮವಾರದಿಂದ ಬಂದ್‌ಮಾಡಿ ಗಣಿ ಆಡಳಿತವರ್ಗ ಆದೇಶ ಮಾಡಿದೆ.
1994-95ರ ಅವಧಿಯಲ್ಲಿ ಆರಂಭಗೊಂಡ ಊಟಿ ಚಿನ್ನದಗಣಿ(ನ್ಯೂ ಪ್ರೊಜೆಕ್ಟ್)ಯಲ್ಲಿ ಪ್ರಸ್ತುತ ಅಧಿಕಾರಿಗಳು ಸೇರಿ 170 ಜನ ನೌಕರರು ಕೆಲಸ ಮಾಡುತ್ತಿದ್ದಾರೆ. ಊಟಿ ಗಣಿಯಲ್ಲಿ ಹೇಳಿಕೊಳ್ಳುವಂತ ಚಿನ್ನದ ಪ್ರಮಾಣ ದೊರಯುತ್ತಿಲ್ಲ, ಉತ್ಪಾದಿಸಿದ ಅದಿರಿನಲ್ಲಿ ಪ್ರತಿ ಟನ್‌ಗೆ ಸರಾಸರಿ 2 ಗ್ರಾಂ. ಮಾತ್ರ ಚಿನ್ನ ದೊರೆಯುತ್ತಿದ್ದು ಇದು ನಷ್ಟಕ್ಕೆ ಕಾರಣವಾಗುತ್ತಿದ್ದರೂ ಅಲ್ಲಿಯ ಜನರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಗಣಿಗಾರಿಕೆ ನಡೆಸುತ್ತಾ ಬರಲಾಗುತಿತ್ತು.
ಊಟಿ ಗ್ರಾಮದಲ್ಲಿ ಚಿನ್ನದಗಣಿ ಆರಂಭವಾದಾಗ ಚಿನ್ನದ ನಿಕ್ಷೇಪವಿರುವ 320 ಎಕರೆ ಭೂಮಿಯನ್ನು ಮಾತ್ರ ಹಟ್ಟಿಗಣಿ ಕಂಪನಿ ಭೂಸ್ವಾಧೀನಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ಚಿನ್ನದಗಣಿಗಾರಿಕೆ ಮಾಡಿದ ನಂತರ ಇಲ್ಲಿ ತೆಗೆಯಲಾಗುವ ಚಿನ್ನದ ಅದಿರನ್ನು ಇಲ್ಲಿಂದ 25 ಕಿ.ಮೀ.ದೂರದಲ್ಲಿರುವ ಹಟ್ಟಿಗಣಿಯ ಲೋಹವಿಭಾಗಕ್ಕೆ ಸಾಗಣೆಗಾಗಿ ರಸ್ತೆಯ ಅಡೆತಡೆಗಳ ಬಗ್ಗೆ ಆಗ ಗಣಿ ಆಡಳಿತವರ್ಗ ಯೋಚಿಸಿಲ್ಲ. ರಸ್ತೆಗೆ ಸಂಬಂಧಿಸಿದಂತೆ ಎಲ್ಲಾ ಜಮೀನುಗಳ ಭೂಸ್ವಾಧೀನ ಕೈಗೊಳ್ಳುವಲ್ಲಿ ವಿಳಂಭ ಧೋರಣೆ ಅನುಸರಿಸಿದ್ದು ಮುಳುವಾಗಿದೆ.
ಊಟಿಗಣಿಯಿಂದ ಗ್ರಾಮದ ಮುಖ್ಯರಸ್ತೆವರೆಗೆ ಬರಬೇಕಾದರೆ 4 ಕಿ.ಮೀ.ದೂರವಿದ್ದು, ಇಲ್ಲಿ ಅಧಿಕೃತವಾದ ಯಾವ ರಸ್ತೆಯಿಲ್ಲ. ರೈತರ ಹೊಲಗಳಲ್ಲಿ ನಿರ್ಮಾಣ ಮಾಡಲಾದ ರಸ್ತೆ ಮೂಲಕ ಅದಿರು ಸಾಗಣೆ ಲಾರಿಗಳು ಸಂಚರಿಸುತ್ತಾ ಬಂದಿದ್ದವು. ಹೀಗಾಗಿ ರಸ್ತೆ ಹಾದು ಹೋದ ಹೊಲಗಳ ಕೆಲವು ರೈತರು ಇನ್ನಷ್ಟು ಉದ್ಯೋಗ ಹಾಗೂ ಪರಿಹಾರ ನೀಡಬೇಕೆಂದು ತಗಾದೆ ತೆಗೆದಿದ್ದಾರೆ. ಗಣಿ ಆಡಳಿತವರ್ಗ ನೀವು ಕೇಳಿದಾಗೆ ಉದ್ಯೋಗ ನೀಡಲು ಬರುವುದಿಲ್ಲ. ನಿಯಮದ ಪ್ರಕಾರ ಉದ್ಯೋಗ ನೀಡಲಾಗುವುದೆಂದು ಅವರ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ.
ಗಣಿಯ ನಿಲುವುನ್ನು ಖಂಡಿಸಿ ಕೆಲವು ರೈತರು 2013ರ ರಿಂದ ಈ ರಸ್ತೆ ಮೂಲಕ ಹಾದು ಹೋಗುವ ಅದಿರು ಲಾರಿಗಳ ಸಾಗಣೆಯನ್ನು ತಡೆಹಿಡಿದು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ ಗಣಿ ಆಡಳಿತವರ್ಗ ಒಂದು ವರ್ಷ ಎನ್ನಾರ್ಬಿಸಿ ನಾಲೆ ಪಕ್ಕದ ರಸ್ತೆ ಮೂಲಕ ಅದಿರು ಸಾಗಣೆ ಮಾಡಿದೆ. ಆದರೆ ನಾಲೆಯ ಎಂಜಿನಿಯರುಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಳೆದ ಎರಡು ವರ್ಷದಿಂದ ಒಂದು ಟನ್ ಚಿನ್ನದ ಅದಿರು ಸಹ ಹಟ್ಟಿಗಣಿಗೆ ಬಾರದೆ 50 ಸಾವಿರಕ್ಕೂ ಅಧಿಕ ಟನ್ ಅದಿರು ಊಟಿ ಗಣಿಯಲ್ಲಿ ಸಂಸ್ಕರಣೆಗೆ ಒಳಗಾಗದೆ ಅಲ್ಲೆ ಬೀಳುವಂತಾಗಿದೆ.
ಈ ಚಿನ್ನದಗಣಿಯಲ್ಲಿ ಮೊದಲೆ ಉತ್ಪಾದನೆ ಕಡಿಮೆ ಇದ್ದು, ಉತ್ಪಾದನೆಯಾದ ಅದಿರಿನಲ್ಲಿಯೂ ಕಡಿಮೆ ಪ್ರಮಾಣದ ಚಿನ್ನ ದೊರಕುತ್ತಿದೆ. ಈ ಗಣಿ ನಷ್ಟದಲ್ಲಿದ್ದರೂ ಹೇಗೋ ಗಣಿಗಾರಿಕೆ ನಡೆಸಿದೆ. ಇಂಥದರಲ್ಲಿ ಅಡ್ಡಿ-ಆತಂಕಗಳು ಎದುರಾಗುತ್ತಿರುವುದರಿಂದ ರೋಸಿಹೋಗಿರುವ ಗಣಿ ಆಡಳಿತ ಮಂಡಳಿ, ಗಣಿಗಾರಿಕೆ ನಿಲ್ಲಿಸಿ ಅಲ್ಲಿಯ 170 ನೌಕರರನ್ನು ಹಟ್ಟಿಗಣಿ ಕಂಪನಿ ಸೇರಿದಂತೆ ಇತರ ಯುನಿಟ್‌ಗಳಿಗೆ ವರ್ಗಾಯಿಸಿ ಶನಿವಾರವೇ ಆದೇಶ ಹೊರಡಿಸಿದೆ.







