ಭಾರತೀ ಶಾಲಾ ಮಕ್ಕಳಿಂದ ಸ್ವಚ್ಛ ಮನೆ ಸಂಕಲ್ಪ

ಕೊಣಾಜೆ, ಫೆ. 7: ಕುರ್ನಾಡು ಗ್ರಾಮದ ಮುಡಿಪು ಭಾರತೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ಶಿಕ್ಷಕರು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮನೆ ಮತ್ತು ಗ್ರಾಮ ನಿರ್ಮಾಣಕ್ಕೆ ಸಾಮೂಹಿಕ ಸಂಕಲ್ಪ ಮಾಡಿದರು.
ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಅಪ್ನಾದೇಶ್, ಜನ ಶಿಕ್ಷಣ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆಸಿದ ಅರಿವು ನೆರವು ಕಾರ್ಯಕ್ರಮದಲ್ಲಿ ವಿಷಕಾರಿಯಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ, ಬೆಂಕಿಯಲ್ಲಿ ಸುಡುವ, ಕೆಟ್ಟ ಕ್ರಮದಿಂದಾಗಿ ಜನ, ಜಾನುವಾರು ಪರಿಸರ ಹಾಗೂ ಜೀವ ಸಂಕುಲಕ್ಕೆ ಆಗುವ ಅನಾಹುತಗಳ ಬಗ್ಗೆ ಮಹಾತ್ಮ ಗಾಂಧಿ ನರೇಗಾದ ಮಾಜಿ ಓಂಬಡ್ಸ್ ಮೆನ್ ಮಾಹಿತಿ ನೀಡಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮನೆ, ಶಾಲೆ ನಿರ್ಮಾಣದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರು ಕೃಷ್ಣ ಮೂಲ್ಯ, ತ್ಯಾಜ್ಯ ಮುಕ್ತ ಮಾದರಿ ಮನೆಯ ಪ್ರೇಮ ಹಾಗೂ ಜಿಲ್ಲಾ ಪಂಚಾಯತ್ ನಿರ್ಮಿಸಿದ ಭುವಿ ಚಿತ್ರಗಳನ್ನು ಪ್ರದರ್ಶಿಸಿದರು. ಭಾರತೀ ಶಾಲಾ ಸಂಚಾಲಕ ಸುಬ್ರಮಣ್ಯ ಭಟ್, ಮುಖ್ಯ ಗುರು ರಾಮಕೃಷ್ಣ ಭಟ್, ಶಿಕ್ಷಕಿಯರಾದ ಶಶಿಕಲಾ, ವಿಜಯಲಕ್ಷ್ಮಿ, ದಿವ್ಯಾ, ಶಿಕ್ಷಕರಾದ ಮಹಾಲಿಂಗೇಶ್ವರ, ಹರೀಶ್ ಕುಮಾರ್, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





