ಡಾ.ಅಂಬೇಡ್ಕರ್ ಜೀವನ ಸಾಧನೆಯ ಪ್ರತಿಬಿಂಬ
ಗಮನ ಸೆಳೆದ ಭಾರತ ಭಾಗ್ಯವಿಧಾತ ಧ್ವನಿ-ಬೆಳಕು ಕಾರ್ಯಕ್ರಮ

ಮಡಿಕೇರಿ, ಫೆ.7: ಅಸಮಾನತೆಯ ನೋವುಂಡು ಬೆಳೆದು, ಜಗದ ಜ್ಞಾನವ ಗಳಿಸಿ ಬದುಕಿನುದ್ದಕ್ಕೂ ಹೋರಾಡಿ ಬುದ್ಧನ ವೈಚಾರಿಕತೆಯಲ್ಲಿ ಬೆಳೆದ ಭಾರತ ಭಾಗ್ಯವಿಧಾತ, ಜಗದ ಕಣ್ಣು ತೆರೆಸಿದಾತ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದ ಯಶೋಗಾಥೆಯನ್ನು ನಾಡಿನ ಕಲೆ, ಸಂಸ್ಕೃತಿಯ ಮೂಲಕ ಕಲಾವಿದರು ಅನಾವರಣಗೊಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೆ ವರ್ಷಾಚರಣೆ ಅಂಗವಾಗಿ ನಡೆದ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕ ನಗರದ ಗಾಂಧಿ ಮೈದಾನದಲ್ಲಿ ಸೋಮವಾರ ವರ್ಣರಂಜಿತವಾಗಿ ನಡೆಯಿತು.
ಕಂಸಾಳೆ ಕಲಾವಿದರು ಭಾರತ ಭಾಗ್ಯವಿಧಾತರನ್ನು ಪರಿಚಯಿಸುವ ಪರಿ ವಿಭಿನ್ನವಾಗಿ ಮೂಡಿಬಂದಿತು. ‘ಯಾರು ಭಾರತ ಭಾಗ್ಯವಿಧಾತ ಎಂಬ ಪ್ರಶ್ನೆಗೆ ಕಾರ್ಮಿಕರ ಕಾನೂನು ರೂಪಿಸಿದಾತ, ಕುಡಿಯುವ ನೀರಿನ ಹಕ್ಕು ಕೊಡಿಸಿದ, ಪ್ರತಿ ಹೆಣ್ಣಿಗೂ ಗೌರವದ ಬದುಕು ಕೊಟ್ಟವ, ಆತನೇ ನಮ್ಮ ಭಾರತ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್’ ಎಂದು ಪರಿಚಯಿಸಿದರು. ಬಾಲಕನಾಗಿ ಭೀಮ್‌ರಾವ್ ಶಿಕ್ಷಕ ಮಹದೇವ ಅಂಬೇಡ್ಕರ್ ಪ್ರೀತಿಗೆ ಪಾತ್ರನಾಗುವುದು, ಶಾಲೆಯಲ್ಲಿನ ಅಸಮಾನತೆ, ಬಾಲಕ ಅಂಬೇಡ್ಕರ್‌ನನ್ನು ಗಾಡಿಯಿಂದ ತಳ್ಳಿದ ಹಿಂದಿನ ಘಟನೆಯನ್ನು ಕಣ್ಮುಂದೆ ತಂದರು.
ನಂತರ ಶಾಹುಮಹಾರಾಜರ ಸಹಾಯದಿಂದ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಸಂವಿಧಾನ ಬರೆದಿದ್ದನ್ನು ಕಲಾವಿದರು ದೃಶ್ಯ ವೈಭವಗಳಲ್ಲಿ ಪ್ರಸ್ತುತಪಡಿಸಿದರು. ಧ್ವನಿ ಬೆಳಕು ಕಾರ್ಯಕ್ರಮದ ವೈಶಿಷ್ಟ್ಯ ಭಾರತ ಭಾಗ್ಯ ವಿಧಾತ-ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾಚೇತನದ ಜೀವನ ಚರಿತ್ರೆಯಾಗಿದ್ದು, ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ.
ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆಯಾಗಿತ್ತು. ಭಾರತ ಸಂವಿಧಾನದ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿಯ ಜೀವನಗಾಥೆಯ ಧ್ವನಿ ಬೆಳಕು ಕಾರ್ಯಕ್ರಮ ದೃಶ್ಯ ವೈಭವಗಳ ರೂಪಕವಾಗಿತ್ತು. ದೇಶದ ಹಲವಾರು ಮಹನೀಯರ ಕರ್ಮಭೂಮಿ. ಸತ್ಯ, ಶಾಂತಿ, ಅಹಿಂಸೆಯೆಂಬ ಮಹಾ ಮೌಲ್ಯಗಳ ಮೂಲಕ ನಮ್ಮ ನಾಡಿಗೆ ಸ್ವಾತಂತ್ರ್ಯ ದೊರಕಿಸಿ, ಭಾರತದ ರಾಷ್ಟ್ರಪಿತನೆಂಬ ಮಹಾಗೌರವಕ್ಕೆ ಪಾತ್ರರಾದವರು ಮಹಾತ್ಮ ಗಾಂಧೀಜಿ. ಹಾಗೆಯೇ ಡಾ. ಬಿ.ಆರ್. ಅಂಬೇಡ್ಕರ್ ಭಾರತದ ತಳ ಸಮುದಾಯಗಳ ಆತ್ಮ ಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದ ಮಹಾ ಮಾನವತಾವಾದಿ.
ಸೋಮವಾರ ನಗರದ ಗಾಂಧಿ ಮೈದಾನದಲ್ಲಿ ನಡೆದ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿಪಂ ಸಿಇಒ ಚಾರುಲತಾ ಸೋಮಲ್, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮುಮ್ತಾಜ್, ಪೌರಾಯುಕ್ತೆ ಬಿ.ಶುಭಾ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.







