ಮೂಲಭೂತ ಸೌಕರ್ಯದ ಕೊರತೆ: ಮುಚ್ಚಿದ ಸರ್ಕಾರಿ ಶಾಲೆ
ತರಗತಿಯನ್ನು ಆರಂಭಿಸುವಂತೆ ಹೆತ್ತವರ ಆಗ್ರಹ

ಪುತ್ತೂರು, ಫೆ. 7: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಕಳೆದ ಸುಮಾರು 50 ವರ್ಷಗಳಿಂದಲೂ ಅಧಿಕ ಹಳೆಯದಾದ ದ.ಕ. ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯನ್ನು ಶೌಚಾಲಯ ಸೇರಿದಂತೆ ಕೆಲವೊಂದು ಮೂಲಭೂತ ಸೌಕರ್ಯದ ಕೊರತೆ ಹಾಗೂ ಕಟ್ಟಡ ಹಳೆಯದಾದ ಕಾರಣ ಇಲಾಖೆಯು ಮುಚ್ಚಿ ಇಲ್ಲಿನ 21 ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿರುವ ಪ್ರಸಂಗ ಕಳೆದ ಒಂದು ವಾರದಲ್ಲಿ ನಡೆದಿದ್ದು, ಸುಮಾರು 8 ಮಕ್ಕಳನ್ನು ಶಾಲೆಗೆ ಕರೆತಂದ ಪೋಷಕರು ತಮ್ಮ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ನೀಡಬೇಕು. ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದ ಘಟನೆ ಮಂಗಳವಾರ ನಡೆಯಿತು.
ಮೂಲಭೂತ ಸೌಕರ್ಯದ ಕೊರತೆಯ ಕಾರಣದಿಂದಾಗಿ ದೇವಾಲಯದ ವಠಾರದ ಸರ್ಕಾರಿ ಶಾಲೆಯನ್ನು ಫೆ.1ರಿಂದ ಮುಚ್ಚಲಾಗಿತ್ತು. ಈ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿ ತನಕ ಕಲಿಯುತ್ತಿದ್ದ 21 ಮಂದಿ ಮಕ್ಕಳನ್ನು ನೆಲ್ಲಿಕಟ್ಟೆ, ಹಾರಾಡಿ, ಸಾಲ್ಮರ,ರಾಗಿಮುಮೇರು ಹಾಗೂ ಬೊಳ್ವಾರು ಸರ್ಕಾರಿ ಶಾಲೆಗಳಿಗೆ ದಾಖಲಿಸಲಾಗಿತ್ತು. ಆದರೆ ಬೇರೆ ಶಾಲೆಗಳಿಗೆ ಸೇರ್ಪಡೆಗೊಳ್ಳುವ ಮೂಲಕ ಚದುರಿ ಹೋದ ಮಕ್ಕಳ ಪೈಕಿ 8 ಮಂದಿ ಇದೀಗ ಮತ್ತೆ ತಮ್ಮ ಹೆತ್ತವರೊಂದಿಗೆ ಶಾಲೆಗೆ ಆಗಮಿಸಿ, ನಮ್ಮ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ನೀಡಿ ಎಂದು ಒತ್ತಾಯಿಸಿದ್ದಾರೆ.
ನೆಲ್ಲಿಕಟ್ಟೆ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇಲ್ಲಿನ ಶಾಲಾ ಮಕ್ಕಳಿಗೆ ತರಗತಿ ಆರಂಭಿಸುವುದಾಗಿ ಮತ್ತು ಬರುವ ಜೂನ್‌ನಿಂದ ಮತ್ತೆ ಇದೇ ಶಾಲೆಯಲ್ಲಿ ತರಗತಿ ಆರಂಭಿಸುವುದಾಗಿ ಶಿಕ್ಷಕರು ತಿಳಿಸಿದ ಕಾರಣ ನಾವು ನಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲಿಸಲು ಒಪ್ಪಿಕೊಂಡಿದ್ದೆವು. ಆದರೆ ಇದೀಗ ಈ ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ಕೆಲಸ ಆಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮನ್ನು ಮಾತನಾಡಲು ಕೂಡ ಬಿಟ್ಟಿಲ್ಲ ನಮ್ಮ ಮಾತಿಗೆ ಬೆಲೆ ನೀಡಿಲ್ಲ ಎಂದು ತಮ್ಮ ಮಕ್ಕಳೊಂದಿಗೆ ಶಾಲೆಗೆ ಬಂದಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಚೆನ್ನಮ್ಮ, ಪೋಷಕರಾದ ಪದ್ಮಜಾ,ಸುನಿತಾ,ಚೆನ್ನಮ್ಮ ಮತ್ತು ನಾಗಮ್ಮ ಎಂಬವರು ಆರೋಪಿಸಿದ್ದಾರೆ.
ಪರೀಕ್ಷೆಗಳು ಹತ್ತಿರುವ ಬರುತ್ತಿರುವ ಸಮಯದಲ್ಲಿ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳುಹಿಸಿರುವುದು ಸರಿಯಲ್ಲ, ತಮ್ಮ ಮಕ್ಕಳು ಕೂಡ ಬೇರೆ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದು, ಇದರಿಂದಾಗಿ ನಮ್ಮ ಮಕ್ಕಳ ಶಿಕ್ಷಣ ಭವಿಷ್ಯ ಹಾಳಾಗುತ್ತಿದೆ . ಈ ಸಂದರ್ಭದಲ್ಲಿ ಶಾಲೆ ಮುಚ್ಚುವುದಕ್ಕೆ ನಮ್ಮ ಆಕ್ಷೇಪವಿದೆ ಎಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಜೊತೆಗೆ ಇತರ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಇಲ್ಲಿನ ನಡೆಯುತ್ತಿರುವ ಕಾಮಗಾರಿಗಳು ನಡೆಯುತ್ತಿದೆ. ಮಕ್ಕಳ ರಕ್ಷಣೆಯ ಉದ್ದೇಶದಿಂದ ಇಲ್ಲಿನ ಎಲ್ಲಾ ಮಕ್ಕಳನ್ನು ಅವರ ಮನೆಗಳ ಪಕ್ಕದ ಶಾಲೆಗಳಿಗೆ ಇಲಾಖೆಯ ಆದೇಶದಂತೆ ಸೇರಿಸಲಾಗಿದೆ. ಎಲ್ಲಾ ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ಸೇರ್ಪಡೆಗೊಂಡಿರುವ ಕುರಿತು ಆಯಾ ಶಾಲೆಗಳಿಂದ ದಾಖಲಾತಿ ಮಾಹಿತಿ ಬಂದಿದೆ ಎಂದು ಹೇಳಿದ ಮುಖ್ಯ ಶಿಕ್ಷಕಿ ಅವರು ಆ ಶಾಲೆಗಳಲ್ಲಿನ ಶಿಕ್ಷಕರು ಮತ್ತು ನಮ್ಮ ಇಲಾಖೆ ಹೇಳಿದಂತೆ ನಾವು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಶಾಲೆ ಮುಚ್ಚುವ ಹುನ್ನಾರ: ಲೋಕೇಶ್ ಅಲುಂಬುಡ
ಮೂಲಭೂತ ಕೊರತೆಯ ನೆಪದಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಸುಳ್ಳು ಮಾಹಿತಿಯನ್ನು ನೀಡಿ ,ಅವರಿಂದ ಸುಳ್ಳು ಹೇಳಿಕೆ ಬರೆಸಿಕೊಂಡು ಕಳೆದ ಫೆ.1ರಂದು ಏಕಾಏಕಿಯಾಗಿ ಶಾಲೆಯನ್ನು ಮುಚ್ಚಿ ಮಕ್ಕಳನ್ನು ಬೇರೆ ಬೇರೆ ಶಾಲೆಗಳಿಗೆ ಕಳುಹಿಸುವ ಹುನ್ನಾರ ನಡೆದಿದೆ ಎಂದು ಮಕ್ಕಳ ಹಕ್ಕು ಹೋರಾಟಗಾರ ಲೋಕೇಶ್ ಅಲುಂಬುಡ ಅವರು ಆರೋಪಿಸಿದ್ದಾರೆ.
ಫೆ.1ರಂದು ಶಾಲೆಯನ್ನು ಮುಚ್ಚಿದರೂ ಅಲ್ಲಿನ ಶಿಕ್ಷಕರಿಬ್ಬರು ಅದೇ ಶಾಲೆಯಲ್ಲಿ ಹಾಜರಾತಿ ಹಾಕುತ್ತಿದ್ದಾರೆ. ಕಳೆದ ಆರು ದಿನಗಳಿಂದ ಇಬ್ಬರು ಶಿಕ್ಷರು ಮುಚ್ಚಲ್ಪಟ್ಟ ಶಾಲೆಯಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದರೂ ಶಿಕ್ಷಣಾಧಿಕಾರಿಗಳು ಗಮನಹರಿಸಿಲ್ಲ ಎಂದು ಆರೋಪಿಸಿರುವ ಲೋಕೇಶ್ ಅಲುಂಬುಡ ಅವರು ಬೆದರಿಸಿ ಖಾಲಿ ಪೇಪರ್‌ಗೆ ಸಹಿ ಪಡೆದುಕೊಂಡು ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸಿರುವ ಕುರಿತು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಚ್ಚುವ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ- ಸುಧಾಕರ ಶೆಟ್ಟಿ ಶಾಲೆಯನ್ನು ಮುಚ್ಚುವ ಬಗ್ಗೆ ಶಿಕ್ಷಕರಾಗಲೀ, ಇಲಾಖೆ ಅಧಿಕಾರಿಗಳಾಗಲೀ ನಮ್ಮ ಗಮನಕ್ಕೆ ತಂದಿಲ್ಲ. ನಾವು ಈ ಹಿಂದೆಯೂ ಶಾಲೆಗೆ ಎಲ್ಲಾ ಸಹಾಯ ಸಹಕಾರ ನೀಡಿದ್ದೆವು. ಮುಂದೆಯೂ ಶಾಲೆಯಲ್ಲಿ ಮಕ್ಕಳಿದ್ದರೆ ನಾವು ಸಹಕಾರ ನೀಡುತ್ತೇವೆ. ಶಾಲೆಯ ಎಲ್ಲಾ ಮಕ್ಕಳಿಗೂ ದೇವಳದ ವತಿಯಿಂದ ಮದ್ಯಾಹ್ನದ ಊಟ ನೀಡಲಾಗುತ್ತಿದೆ. ಮೊದಲಿಗೆ ಮಕ್ಕಳಿಗೆ ನೀಡಿ ಪ್ರಾರ್ಥನೆ ನಡೆಸಿ ಬಳಿಕ ಇತರ ಭಕ್ತಾಧಿಗಳಿಗೆ ನೀಡಲಾಗುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ದೇವಳದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿರುವಾಗ ಶೌಚಾಲಯ, ನೀರಿನ ತಾತ್ಕಾಲಿಕ ಸಮಸ್ಯೆಗಳಾಗುವುದು ಸಹಜವಾಗಿದ್ದು, ಅದಕ್ಕಾಗಿ ಶಾಲೆಯನ್ನು ಮುಚ್ಚುತ್ತಿದ್ದೇವೆ ಎಂಬ ಹೇಳಿಕೆಯನ್ನು ನೀಡುತ್ತಿರುವುದು ಸರಿಯಲ್ಲ. 21 ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಎಲ್ಲಾ ವ್ಯವಸ್ಥೆಗಳು ದೇವಳದ ವಠಾರದಲ್ಲಿ ಮತ್ತು ಸುತ್ತಮುತ್ತಲಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ.







