ಪುತ್ತೂರು: ಪಿಎಫ್‌ಐ ಮಾಜಿ ರಾಜ್ಯ ಅಧ್ಯಕ್ಷ ಸೇರಿದಂತೆ ಐವರು ದೋಷಮುಕ್ತ
ಕೋಮು ಪ್ರಚೋದಕ ಭಾಷಣ ಆರೋಪ ಪ್ರಕರಣ
ಪುತ್ತೂರು, ಫೆ. 7: ಕೋಮು ದ್ವೇಷ ಬಾಷಣ ಮಾಡಿರುವ ಆರೋಪ ಎದುರಿಸುತ್ತಿದ್ದ ಪಿಎಫ್‌ಐ ಮಾಜಿ ರಾಜ್ಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸೇರಿದಂತೆ ಐವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಳೆದ 2009 ಜನವರಿಯಲ್ಲಿ ಪಿಎಫ್‌ಐ ಉಪ್ಪಿನಂಗಡಿ ವಲಯದ ವತಿಯಿಂದ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಇಲ್ಯಾಸ್ ಮುಹಮ್ಮದ್ ತುಂಬೆ, ಕೆಎಫ್‌ಡಿ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಪುತ್ತೂರು, ಪ್ರಗತಿಪರ ಚಿಂತಕ ಜಿ. ರಾಜಶೇಖರ್, ದಲಿತ ಮುಖಂಡ ಮಹಾಲಿಂಗ, ಪಿಎಫ್‌ಐ ಉಪ್ಪಿನಂಗಡಿ ವಲಯ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಮೆಜೆಸ್ಟಿಕ್ ಇವರ ವಿರುದ್ದ ಉಪ್ಪಿನಂಗಡಿ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ರೋಹಿತಾಕ್ಷ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಪುತ್ತೂರು ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಆಶ್ರಫ್ ಕೆ. ಅಗ್ನಾಡಿ, ಅಬ್ದುಲ್ ಮಜೀದ್ ಖಾನ್ ಮತ್ತು ಅಬ್ದುರ್ರಹ್ಮಾನ್ ಹಿರೇಬಂಡಾಡಿ ವಾದಿಸಿದ್ದರು.





