ನೋಟು ಅಮಾನ್ಯ ಸಮಯ ಅತ್ಯಂತ ಸೂಕ್ತವಾಗಿತ್ತು: ಪ್ರಧಾನಿ
ಹೊಸದಿಲ್ಲಿ,ಫೆ.7: ನೋಟು ಅಮಾನ್ಯ ಕ್ರಮ ಕುರಿತು ಟೀಕೆಗಳಿಗೆ ಇಂದು ಲೋಕಸಭೆಯಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದ್ದರಿಂದ ನೋಟು ಅಮಾನ್ಯ ನಿರ್ಧಾರದ ಸಮಯ ಅತ್ಯಂತ ಸೂಕ್ತವಾಗಿತ್ತು ಎಂದು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆತ್ತಿಕೊಂಡ ಅವರು,ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅದರ ಸಾಧನೆಗಳನ್ನು ಪ್ರಶ್ನಿಸಿದರು.
ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಪ್ರಧಾನಿ, ಸರ್ಜಿಕಲ್ ದಾಳಿಗಳು ಹಾಗೂ ನರೇಗಾ ಯೋಜನೆ, ಕೃಷಿ ಕ್ಷೇತ್ರ ಮತ್ತು ಪರಿಶಿಷ್ಟ ಜಾತಿಗಳ ಅಭ್ಯುದಯಕ್ಕೆ ಹಣ ಹಂಚಿಕೆ ಸೇರಿದಂತೆ ಪ್ರತಿಪಕ್ಷವು ಎತ್ತಿದ್ದ ವಿವಿಧ ವಿಷಯಗಳಿಗೆ ಒಂದೊಂದಾಗಿ ಉತ್ತರಿಸಿದರು.
ಪ್ರತಿಪಕ್ಷವು ವಂದನಾ ನಿರ್ಣಯಕ್ಕೆ 190 ತಿದ್ದುಪಡಿಗಳನ್ನು ಸೂಚಿಸಿತ್ತಾದರೂ ಅವೆಲ್ಲ ತಿರಸ್ಕೃತಗೊಂಡವು. ಬಳಿಕ ಕಾಂಗ್ರೆಸ್‌ನ ಸಭಾತ್ಯಾಗದ ನಡುವೆಯೇ ಸದನವು ವಂದನಾ ನಿರ್ಣಯವನ್ನು ಅಂಗೀಕರಿಸಿತು. ಮೋದಿ ಅವರು ಸದನವನ್ನುದ್ದೇಶಿಸಿ ಮಾಡಿದ 90 ನಿಮಿಷಗಳ ಭಾಷಣಕ್ಕೆ ಆಗಾಗ್ಗೆ ಕೆಲವು ಪ್ರತಿಪಕ್ಷ ಸದಸ್ಯರಿಂದ ವ್ಯತ್ಯಯವುಂಟಾಗುತ್ತಲೇ ಇತ್ತು.
ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವುದಕ್ಕೆ ಒತ್ತು ನೀಡಿದ ಮೋದಿ, ರಾಜಕೀಯ ಮತಭೇದಗಳನ್ನು ಮರೆತು ಈ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಎಲ್ಲ ಪಕ್ಷಗಳನ್ನು ಕೋರಿಕೊಂಡರು.
ನೋಟು ರದ್ದತಿ ಕುರಿತಂತೆ ನಿರಂತರವಾಗಿ ಟೀಕೆಗಳಿಗೆ ಗುರಿಯಾಗಿರುವ ಮೋದಿ, ಕಳೆದ ವರ್ಷದ ನ.8ರಂದು ಪ್ರಕಟಿಸಲಾಗಿದ್ದ ನೋಟು ಅಮಾನ್ಯ ನಿರ್ಧಾರದ ಸಮಯ ಅತ್ಯಂತ ಸೂಕ್ತವಾಗಿತ್ತು. ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದ್ದಾಗ ನೋಟು ಅಮಾನ್ಯ ನಿರ್ಧಾರವೇಕೆ ಎಂದು ಕೆಲವರು ಪ್ರಶ್ನಿಸಿದ್ದರು. ಆರ್ಥಿಕತೆ ದೃಢವಾಗಿದ್ದರಿಂದಲೇ ಅದು ನೋಟು ರದ್ದತಿಗೆ ಅತ್ಯುತ್ತಮ ಸಮಯವಾಗಿತ್ತು. ಆರ್ಥಿಕತೆಯು ದುರ್ಬಲವಾಗಿದ್ದರೆ ನಾವು ಅದನ್ನು ಯಶಸ್ವಿಯಾಗಿ ಮಾಡಲು ಆಗುತ್ತಿರಲಿಲ್ಲ ಎಂದರು.
ರೋಗಿಯನ್ನು ಶಸ್ತ್ರಚಿಕಿತ್ಸೆಗೊಳಪಡಿಸುವ ಮುನ್ನ ವೈದ್ಯರು ಎಲ್ಲ ವೈದ್ಯಕೀಯ ತಪಾಸಣೆಗಳನ್ನು ಕೈಗೊಂಡು ಅದು ತೃಪ್ತಿಕರವಾಗಿದ್ದರೆ ಮಾತ್ರ ಮುಂದಡಿಯಿಡುತ್ತಾರೆ. ತನ್ನ ಸರಕಾರವೂ ನೋಟು ರದ್ದತಿ ನಿರ್ಣಯ ಕೈಗೊಳ್ಳುವ ಮುನ್ನ ಎಲ್ಲ ಮಾನದಂಡಗಳನ್ನು ಪರಿಶೀಲಿಸಿತ್ತು ಎಂದ ಅವರು, ಕೆಲವು ವರ್ಗಗಳು ವಾದಿಸಿರುವಂತೆ ಈ ನಿರ್ಣಯವನ್ನು ಅವಸರ ದಲ್ಲಿ ಕೈಗೊಂಡಿರಲಿಲ್ಲ. ಮೋದಿ ಏನನ್ನಾದರೂ ಅವಸರದಲ್ಲಿ ಮಾಡುತ್ತಾರೆಂದು ಭಾವಿಸಬೇಡಿ. ಅದಕ್ಕಾಗಿ ನೀವು ಮೋದಿ ಯನ್ನು ಅಧ್ಯಯನ ಮಾಡುವುದು ಅಗತ್ಯವಾಗುತ್ತದೆ ಎಂದರು.







