‘ಚಿನ್ನಮ್ಮ’ ಮುಖ್ಯಮಂತ್ರಿ ಗದ್ದುಗೆ ಏರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ಎಡಿಎಂಕೆ
ಚೆನ್ನೈ, ಫೆ.7: ಮಂಗಳವಾರ ಚೆನ್ನೈನಲ್ಲಿ ಆರೋಪ-ಪ್ರತ್ಯಾ ರೋಪಗಳ ಕೆಸರೆರಚಾಟದ ಸುದ್ದಿಗೋಷ್ಠಿಗಳದ್ದೇ ಅಬ್ಬರ. ಇದರ ನಡುವೆ ‘ಚಿನ್ನಮ್ಮ’ ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿ ಗದ್ದುಗೆಯನ್ನೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ತನ್ನ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ತನಗಿದೆ ಎಂದು ಎಡಿಎಂಕೆ ಪ್ರತಿಪಾದಿಸಿದೆ.
ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಎಂಕೆ ಸ್ಥಾಪಕ ಸದಸ್ಯ ಪಿ.ಎಚ್ ಪಾಂಡಿಯನ್ ಮತ್ತು ಅವರ ಪುತ್ರ ಹಾಗೂ ಮಾಜಿ ಸಂಸದ ಮನೋಜ್ ಅವರು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಖಿನ್ನತೆಗೊಳಗಾಗಿದ್ದರು ಮತ್ತು ಅವರಿಗೆ ವಿಷಪ್ರಾಶನ ಮಾಡಲಾಗಿತ್ತು ಎಂದು ಆಪಾದಿಸಿದ್ದರು.
ಕೆಲವೇ ಗಂಟೆಗಳ ಬಳಿಕ ಇನ್ನೊಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಎಂಕೆ ನಾಯಕರಾದ ಪನೃತಿ ರಾಮಚಂದ್ರನ್ ಮತ್ತು ಕೆ.ಎ.ಸೆಂಗೋಟ್ಟೈಯನ್ ಅವರು ಈ ಆರೋಪವನ್ನು ತಳ್ಳಿಹಾಕಿದರಲ್ಲದೆ, ಪಾಂಡಿಯನ್ ಪಕ್ಷವನ್ನು ದುರ್ಬಲಗೊಳಿಸಲು ಎಡಿಎಂಕೆಯ ವಿರೋಧಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.
ಪಾಂಡಿಯನ್‌ರ ಎಲ್ಲ ಆರೋಪಗಳನ್ನು ತಿರಸ್ಕರಿಸಿದ ರಾಮಚಂದ್ರನ್, ಕೆಲವು ವ್ಯಕ್ತಿಗಳು ವದಂತಿಗಳನ್ನು ಹರಡಲು ಮತ್ತು ವಿವಾದಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದೂ ಶಾಂತಿಯುತವಾಗಿ ಸಾಗುತ್ತಿರುವಾಗ ಪಾಂಡಿಯನ್ ಮತ್ತು ಮನೋಜ್ ಇಂತಹ ಆರೋಪಗಳನ್ನು ಮಾಡುವ ಅಗತ್ಯವಿರಲಿಲ್ಲ. ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಪಕ್ಷದ ವೇದಿಕೆಗಳಲ್ಲಿ ಎತ್ತಬಹುದಾಗಿತ್ತು ಎಂದರು.
ಪಕ್ಷದಿಂದ ಸಾಕಷ್ಟು ಲಾಭಗಳನ್ನು ಪಡೆದಿದ್ದರೂ ಪಾಂಡಿಯನ್ ಪಕ್ಷದ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದ ಐವರು ಪಕ್ಷದ ಹುದ್ದೆಗಳಲ್ಲಿದ್ದಾರೆ. ಹೀಗಿದ್ದರೂ ಅವರು ಗೊಂದಲಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಸೆಂಗೋಟ್ಟೈಯನ್, 1990ರಲ್ಲಿ ಎಂಜಿಆರ್ ನಿಧನದ ಬಳಿಕ ಪಕ್ಷವು ವಿಭಜನೆಗೊಂಡಿದ್ದಾಗ ಅವರು ಅದರ ಒಗ್ಗಟ್ಟಿಗಾಗಿ ಶ್ರಮಿಸಿರಲಿಲ್ಲ. ಈಗ ಮಾತನಾಡಲು ಯಾವ ಹಕ್ಕು ಅವರಿಗಿದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯಾಗಿ ಶಶಿಕಲಾ ನೇಮಕ ಕುರಿತಂತೆ ರಾಮಚಂದ್ರನ್ ಅವರು, ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದೆ. ನಮ್ಮ ಶಾಸಕಾಂಗ ಪಕ್ಷವು ತನ್ನ ನಾಯಕಿಯನ್ನಾಗಿ ಅವರನ್ನು ಆಯ್ಕೆ ಮಾಡಿದೆ. ರಾಜ್ಯಪಾಲರು ಅವರ ಪ್ರಮಾಣವಚನ ಸ್ವೀಕಾರಕ್ಕೆ ಸಮಯವನ್ನಷ್ಟೇ ಸೂಚಿಸಬೇಕಾಗಿದೆ. ರಾಜ್ಯಪಾಲರು ಸ್ಪಂದಿಸಿಲ್ಲ ಎಂಬ ಮಾತ್ರಕ್ಕೇ ಇದು ವಿಳಂಬವಾಗಿದೆ ಎಂದು ಅರ್ಥವಲ್ಲ. ಇದು ಕೇವಲ ಅನುಕೂಲದ ಪ್ರಶ್ನೆಯಾಗಿದೆ ಎಂದರು.
ರಾಜ್ಯಪಾಲರು ಪಕ್ಷವು ಆಯ್ಕೆ ಮಾಡಿರುವ ವ್ಯಕ್ತಿಗೆ ಪ್ರಮಾಣ ವಚನವನ್ನು ಬೋಧಿಸುವ ಸಾಂವಿಧಾನಿಕ ಬದ್ಧತೆಯನ್ನು ಹೊಂದಿರುತ್ತಾರೆ ಎಂದು ರಾಮಚಂದ್ರನ್ ಹೇಳಿದರೆ, ಚಿನ್ನಮ್ಮ ತಮಿಳುನಾಡು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಸೆಂಗೋಟ್ಟೈಯನ್ ಘೋಷಿಸಿದರು.





