ಕಾನ್ಪುರ ರೈಲು ಅಪಘಾತದ ಪ್ರಮುಖ ಶಂಕಿತ ನೇಪಾಳದಲ್ಲಿ ಸೆರೆ
ಹೊಸದಿಲ್ಲಿ, ಫೆ.7: ಕಳೆದ ವರ್ಷದ ನ.21ರಂದು ಕಾನ್ಪುರದಲ್ಲಿ ಇಂದೋರ-ಪಾಟ್ನಾ ಎಕ್ಸ್‌ಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಪ್ರಮುಖ ಶಂಕಿತ ಆರೋಪಿಯಾಗಿರುವ, ಪಾಕಿಸ್ತಾನದ ಐಎಸ್‌ಐ ಏಜಂಟ್ ಎನ್ನಲಾಗಿರುವ ಸಂಶುಲ್ ಹುದಾನನ್ನು ಮಂಗಳವಾರ ನೇಪಾಳದಲ್ಲಿ ಬಂಧಿಸಲಾಗಿದೆ. ಈ ಅಪಘಾತದಲ್ಲಿ 150 ಪ್ರಯಾಣಿಕರು ಮೃತಪಟ್ಟಿದ್ದರು.
ದುಬೈನಿಂದ ಗಡಿಪಾರುಗೊಂಡು ನೇಪಾಳದ ರಾಜ ಧಾನಿ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆತನನ್ನು ನೇಪಾಳ ಪೊಲೀಸರ ವಿಶೇಷ ತಂಡವು ಬಂಧಿಸಿತು.
ಬೋಗಿಗಳು ಹಳಿತಪ್ಪಿ ಸಂಭವಿಸಿರುವ ಸರಣಿ ರೈಲು ಅಪಘಾತಗಳ ಕುರಿತಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ನಡೆಸುತ್ತಿರುವ ತನಿಖೆಯಲ್ಲಿ ಹುದಾ ಪ್ರಮುಖ ಕೊಂಡಿಯಾಗಿರುವ ಸಾಧ್ಯತೆಗಳು ಕಂಡು ಬಂದಿವೆ. ಈ ಎಲ್ಲ ಅಪಘಾತಗಳ ಹಿಂದೆ ಐಎಸ್‌ಐ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಕಳೆದ ತಿಂಗಳು ಬಿಹಾರದ ಮೋತಿಹಾರಿಯ ಇಬ್ಬರು ಯುವಕರ ಹತ್ಯೆ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಮೋತಿ ಪಾಸ್ವಾನ್, ಉಮಾಶಂಕರ್ ಪಟೇಲ್ ಮತ್ತು ಮುಕೇಶ್ ಯಾದವ್ ಅವರು ಅಪಘಾತದ ಹಿಂದೆ ಹುದಾ ಪಾತ್ರವಿರುವ ಬಗ್ಗೆ ಮಾಹಿತಿ ನೀಡಿದ್ದರು. ಹುದಾನ ಆದೇಶದಂತೆ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ಸಾಗಲಿದ್ದ ಹಳಿಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಮತ್ತು ಗ್ಯಾಸ್ ಕಟರ್‌ಗಳನ್ನು ಬಳಸಿ ಹಳಿಗಳಿಗೆ ಹಾನಿಯನ್ನುಂಟು ಮಾಡಲಾಗಿತ್ತು ಎನ್ನಲಾಗಿದೆ.





