24 ವಾರ ಪ್ರಾಯದ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಒಪ್ಪಿಗೆ
ಹೊಸದಿಲ್ಲಿ,ಫೆ.7: 22ರ ಹರೆಯದ ಗರ್ಭವತಿ ಯೋರ್ವಳ ಗರ್ಭಾವಸ್ಥೆ ಮುಂದುವರಿದರೆ ಅದು ಆಕೆಯ ಜೀವಕ್ಕೇ ಆಪತ್ತನ್ನುಂಟು ಮಾಡಬಹುದು ಎಂಬ ವೈದ್ಯಕೀಯ ಸಲಹೆಯನ್ನು ಮಂಗಳವಾರ ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು, ತಾನು ಹೊತ್ತಿರುವ 24 ವಾರ ಪ್ರಾಯದ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ಆಕೆಗೆ ಹಸಿರು ನಿಶಾನೆ ತೋರಿಸಿತು.
ಭ್ರೂಣದಲ್ಲಿ ಮೂತ್ರಪಿಂಡಗಳು ರೂಪುಗೊಂಡಿಲ್ಲ, ಶ್ವಾಸಕೋಶಗಳು ಕುಗ್ಗಿವೆ ಮತ್ತು ಇನ್ನೂ ಹಲವು ದೋಷಗಳಿವೆ. ಹೀಗಾಗಿ ಗರ್ಭಾವಸ್ಥೆ ಮುಂದುವರಿದರೆ ಅದು ಆಕೆಯ ಜೀವಕ್ಕೇ ಆಪತ್ತನ್ನುಂಟುಮಾಡಬಹುದು ಎಂದು ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತು ಎಲ್.ಎನ್.ರಾವ್ ಅವರ ಪೀಠವು ಒಪ್ಪಿಕೊಂಡಿತು.
20 ವಾರಗಳ ಗರ್ಭಾವಸ್ಥೆಯ ಬಳಿಕ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯವಿದ್ದರೂ ಗರ್ಭಪಾತ ಮಾಡಿಸಲು ಭಾರತೀಯ ಕಾನೂನಿನಲ್ಲಿ ಅವಕಾಶವಿಲ್ಲ.
ಭ್ರೂಣದಲ್ಲಿ ಮೂತ್ರಪಿಂಡಗಳು ರೂಪುಗೊಂಡಿಲ್ಲ ಎನ್ನುವುದು ತನ್ನ ಗರ್ಭಾವಸ್ಥೆಯ 21ನೆ ವಾರದಲ್ಲಿ ಗೊತ್ತಾಗಿದೆ. ಇದನ್ನು ದೃಢಪಡಿಸಲು ಎರಡು ಬಾರಿ ತಾನು ಸ್ಕಾನಿಂಗ್ ಮಾಡಿಸಿಕೊಂಡಿದ್ದೇನೆ ಎಂದು ಮಹಿಳೆ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ತನ್ನ ಅರ್ಜಿಯಲ್ಲಿ ತಿಳಿಸಿದ್ದಳು.





