ಭಾರತ-ಬಾಂಗ್ಲಾ ಗಡಿ ಬೇಲಿ ರಚನೆ
ಸರಕಾರದ ಅಸ್ಪಷ್ಟ ಉತ್ತರಕ್ಕೆ ಸುಪ್ರೀಂಕೋರ್ಟ್ ಗರಂ
ಹೊಸದಿಲ್ಲಿ, ಫೆ.7: ಭಾರತ- ಬಾಂಗ್ಲಾ ಗಡಿಯುದ್ದಕ್ಕೂ 263 ಕಿ.ಮೀ. ವ್ಯಾಪ್ತಿಯ ತಡೆಬೇಲಿ ನಿರ್ಮಿಸುವ ಕಾರ್ಯಕ್ಕೆ 3 ವರ್ಷದ ಅವಧಿ ಬೇಕು ಎಂದು ಕೇಂದ್ರ ಸರಕಾರ ಸಲ್ಲಿಸಿರುವ ಅಫಿದಾವಿತ್ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಅಸಂತೃಪ್ತಿ ಮತ್ತು ವಿಷಾದ ವ್ಯಕ್ತಪಡಿಸಿದೆ. ನ್ಯಾಯಾಲಯದ ವಿವಿಧ ಆದೇಶದ ಹೊರತಾಗಿಯೂ ತಡೆಬೇಲಿ ನಿರ್ಮಾಣದ ಕಾರ್ಯದ ಪ್ರಗತಿಯ ಬಗ್ಗೆ ಯಾವುದೇ ಸ್ಪಷ್ಟ ವಿವರವನ್ನು ಕೇಂದ್ರ ಸರಕಾರ ಸಲ್ಲಿಸಿದ ಅಫಿದಾವಿತ್‌ನಲ್ಲಿ ನೀಡಲಾಗಿಲ್ಲ. ಇದು ಅಸ್ಪಷ್ಟ ಅಫಿದಾವಿತ್ ಎಂದು ನ್ಯಾಯಾಲಯದ ವಿಭಾಗೀಯ ಪೀಠ ಹೇಳಿದೆ. ಅಫಿದಾವಿತ್‌ನ ಒಂದು ಪ್ಯಾರಾದಲ್ಲಿ, 13.38 ಕಿ.ಮೀ. ಉದ್ದದ ತಡೆಬೇಲಿ ನಿರ್ಮಾಣ ಕಾರ್ಯಕ್ಕೆ 18 ತಿಂಗಳು ಬೇಕಾಗುತ್ತದೆ ಎಂದು ತಿಳಿಸಲಾಗಿದ್ದು, ಈ ದೀರ್ಘಾವಧಿಗೆ ಯಾವುದೇ ಕಾರಣ ನೀಡಲಾಗಿಲ್ಲ. ಇದನ್ನು ಉಲ್ಲೇಖಿಸಿದ ಪೀಠವು, ಸಂಪೂರ್ಣ ವಿವರ ಮತ್ತು ಅಫಿದಾವಿತ್‌ನಲ್ಲಿ ಉಲ್ಲೇಖಿಸಲಾದ ಹೇಳಿಕೆಯ ಬಗ್ಗೆ ಸಮರ್ಥನೆ ನೀಡುವಂತೆ ಗೃಹ ಸಚಿವಾಲಯದ ಸಂಬಂಧಿತ ಪ್ರಾಧಿಕಾರಕ್ಕೆ ಸೂಚಿಸಿದೆ. ಅಸ್ಸಾಂ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿಭಾಗಕ್ಕೆ ತಡೆಬೇಲಿ ನಿರ್ಮಿಸುವ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.





