ಫೆಬ್ರವರಿಯಿಂದಲೇ ನೋಟು ರದ್ದತಿ ಸಮಾಲೋಚನೆ ಆರಂಭ: ಜೇಟ್ಲಿ
ಹೊಸದಿಲ್ಲಿ, ಫೆ.7: ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಕುರಿತು 2016ರ ಫೆಬ್ರವರಿಯಿಂದಲೇ ಸರಕಾರ ಮತ್ತು ರಿಸರ್ವ್ ಬ್ಯಾಂಕ್‌ನ ಉನ್ನತ ಅಧಿಕಾರಿಗಳ ಮಧ್ಯೆ ಸಮಾಲೋಚನೆ ಆರಂಭವಾಗಿತ್ತು. ಈ ಬಗ್ಗೆ ವಿಧ್ಯುಕ್ತ ನಿರ್ಧಾರವೊಂದನ್ನು ಆರ್‌ಬಿಐ ಸರಕಾರಕ್ಕೆ ಸಲ್ಲಿಸಿದ್ದು ಬಳಿಕ ಸರಕಾರ ನಿರ್ಧಾರವನ್ನು ಘೋಷಿಸಿತ್ತು ಎಂದು ರಾಜ್ಯಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದರಂತೆ, ಆರ್‌ಬಿಐಯ ಹಿರಿಯ ಅಧಿಕಾರಿಗಳು ಮತ್ತು ಸರಕಾರದ ಅಧಿಕಾರಿಗಳ ಮಧ್ಯೆ ಹಲವು ಸಮಾಲೋಚನಾ ಸಭೆ ನಡೆಯಿತು. ವಿಷಯವನ್ನು ಅತ್ಯಂತ ಗೌಪ್ಯವಾಗಿಡಬೇಕಾದ ಕಾರಣ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. 2016ರ ಮೇಯಲ್ಲಿ ಅಧಿಕ ಮುಖಬೆಲೆಯ ಹೊಸ ನೋಟುಗಳ ವಿನ್ಯಾಸದ ಬಗ್ಗೆ ಅನುಮತಿ ಪಡೆದುಕೊಂಡ ಬಳಿಕ ಮುದ್ರಣ ಕಾರ್ಯವನ್ನು ಆರ್‌ಬಿಐ ಆರಂಭಿಸಿತ್ತು. ನವೆಂಬರ್ 8ರಂದು ನೋಟು ಅಮಾನ್ಯ ನಿರ್ಧಾರ ಪ್ರಕಟಿಸುವ ಮೊದಲು ನಡೆದ ಸಭೆಯಲ್ಲಿ ಆರ್‌ಬಿಐಯ 10 ನಿರ್ದೇಶಕರ ಪೈಕಿ 8 ಮಂದಿ ಪಾಲ್ಗೊಂಡಿದ್ದರು ಎಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಅವರು ತಿಳಿಸಿದರು. ನೋಟು ಅಮಾನ್ಯ ನಿರ್ಧಾರ ಆರ್‌ಬಿಐಯ ಸ್ವಯಂ ನಿರ್ಧಾರವಾಗಿತ್ತೇ ಅಥವಾ ಸರಕಾರದ ಸೂಚನೆಯಂತೆ ಆರ್‌ಬಿಐ ವರ್ತಿಸಿತ್ತೇ ಎಂಬ ವಿಪಕ್ಷದ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಆರ್‌ಬಿಐಯ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು ಎಂದು ತಿಳಿಸಿದರು.





