ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅಮರಣಾಂತರ ಉಪವಾಸ ಸತ್ಯಾಗ್ರಹ

ಉಡುಪಿ, ಫೆ.8: ಉಡುಪಿ ಜಿಲ್ಲೆಯಲ್ಲಿನ ಮರಳು ಸಮಸ್ಯೆಗೆ ಪರಿಹಾರ, ಕಾರ್ಮಿಕರ ಹಿತ ರಕ್ಷಣೆ ಮತ್ತು ಮೂಲಭೂತ ಹಕ್ಕುಗಳಿಗೆ ಆಗ್ರಹಿಸಿ ಕರ್ನಾಟಕ ಕಾರ್ಮಿಕರ ವೇದಿಕೆಯು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಇಂದಿನಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ ವನ್ನು ಹಮ್ಮಿಕೊಂಡಿದೆ.
ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮರಳಿಗೆ ಸಂಬಂಧಿಸಿ ಮರಳು ಸಮಸ್ಯೆಯನ್ನು ಸರಕಾರವೇ ಸೃಷ್ಠಿಸಿ ಇದೀಗ ಪರಿಹಾರ ಹುಡುಕಲು ಹೊರಟಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಎರಡು ಸಭೆಗಳಾಗಿವೆ. ಅಲ್ಲದೆ ಉಪಸಮಿತಿಗಳನ್ನು ರಚಿಸಲಾಗಿದೆ. ಆದರೆ ವರದಿ ಇನ್ನೂ ಬಂದಿಲ್ಲ. ಸರಕಾರ ಇನ್ನಾದರೂ ಸಿಆರ್‌ಝೆಡ್ ಹಾಗೂ ನಾನ್ ಸಿಆರ್‌ಝೆಡ್‌ಗೆ ಒಂದೇ ನಿಯಮ ಮಾಡಬೇಕು ಮತ್ತು ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ರಚಿಸಬೇಕು. ಸಾಂಪ್ರದಾಯಿಕ ಮರಳುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಸರಕಾರ ಮರಳು ಕಾರ್ಮಿಕರನ್ನು ಕರೆದು ಚರ್ಚೆ ನಡೆಸಬೇಕು. ಮರಳು ಲಾರಿಗಳ ಮೇಲೆ 50ಸಾವಿರದಿಂದ 1ಲಕ್ಷದವರೆಗೆ ದಂಡ ಹಾಕಲಾಗುತ್ತಿದೆ. ನೀತಿಯಲ್ಲಿ ಬದಲಾವಣೆ ತರುವ ಮೂಲಕ ದಂಡಕ್ಕೆ ಮಾನದಂಡ ಜಾರಿ ಗೊಳಿಸಬೇಕು. ಕರಾವಳಿಯಿಂದ ಹೊರಜಿಲ್ಲೆಗೆ ಮರಳು ಸಾಗಿಸುವುದನ್ನು ತಡೆಯಲು ಒತ್ತಡ ಹೇರಿದ್ದರಿಂದ ಗಡಿಭಾಗದಲ್ಲಿ ಸಿಸಿಟಿವಿ ಹಾಕಲಾಗಿದೆ. ಆದರೂ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಬೇಡಿಕೆಗಳು: ಮರಳು ಸಮಸ್ಯೆ ಅತಿ ಶೀಘ್ರದಲ್ಲಿ ಪರಿಹರಿಸಬೇಕು. ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಸಾಂಪ್ರದಾಯಿಕ ಪದ್ಧತಿಗೆ ಒತ್ತು ನೀಡಬೇಕು. ಜಿಲ್ಲಾಡಳಿತವೇ ಮುಂದೆ ನಿಂತು ಸಮಸ್ಯೆ ಇತ್ಯರ್ಥ ಆಗುವವರೆಗೆ ಮರಳು ತೆಗೆಯಲು ಅವಕಾಶ ನೀಡಬೇಕು. ಜಿಲ್ಲೆಯಲ್ಲಿರುವ ಕಲ್ಲು ಕೋರೆ ಮತ್ತು ಕ್ರಷರ್‌ಗಳಿಗೆ ಪರವಾನಿಗೆ ತಕ್ಷಣ ನೀಡಬೇಕು.
ಕಲ್ಲುಕೋರೆ ಮತ್ತು ಜೆಲ್ಲಿ ಕ್ರಷರ್ ಹಾಗೂ ಮರಳು ಅನುಮತಿ ದೊರೆ ಯುವವರೆಗ ಅಗತ್ಯತೆಗೆ ಬೇಕಾದ ಸಮಗ್ರ ಕಟ್ಟಡ ಸಾಮಾಗ್ರಿಗಳನ್ನು ಸಾಗಿ ಸಲು ಮಾನವೀಯತೆ ಮತ್ತು ಕಾರ್ಮಿಕರ ಹಿತ ಕಾಯುವಲ್ಲಿ ಅನುಮತಿ ನೀಡಬೇಕು. ಬಡ ಲಾರಿ ಮಾಲೀಕರಿಗೆ ಯಾವುದೇ ರೀತಿಯ ದಂಡ ಬರಿಸಲು ಸಾಧ್ಯವಿಲ್ಲದ ಕಾರಣ ನಿಯಮಗಳು ಸರಿ ಆಗುವವರೆಗೆ ಮಾನವೀಯತೆ ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ದೂರು ದಾಖಲಿಸಿ ದಂಡ ಹಾಕಬಾರದು. ವಲಸೆ ಕಾರ್ಮಿಕರಿಗೆ ತಕ್ಷಣ ಭತ್ಯೆ ನೀಡಬೇಕು.
ಈ ಸಂದರ್ಭದಲ್ಲಿ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ನಾಗೇಂದ್ರ, ವೇದಿಕೆ ಮುಖಂಡರಾದ ರೋಹಿತ್ ಕರಂಬಳ್ಳಿ, ಸಂದೀಪ್, ಸುಧಾಕರ್ ನಾಯಕ್, ಚಂದ್ರ ಪೂಜಾರಿ, ನಿವೇಶ್ ಕುಮಾರ್ ಮೊದಲಾದ ವರು ಉಪಸ್ಥಿತರಿದ್ದರು.







