ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಕೇರಳ ಮಾದರಿಯಲ್ಲೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಆಗ್ರಹ
ಹಿಂ.ವರ್ಗಗಳ-ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವರದಿ ಮಂಡನೆ
ಬೆಂಗಳೂರು, ಫೆ. 8: ರಾಜ್ಯದ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಕೇರಳ ರಾಜ್ಯದ ಮಾದರಿಯಲ್ಲೆ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.
ಬುಧವಾರ ಸಮಿತಿ ಅಧ್ಯಕ್ಷ ಜೆ.ಆರ್.ಲೋಬೋ, ಸಮಿತಿ ವರದಿ ಮಂಡಿಸಿದರು. ಕೇರಳ ರಾಜ್ಯದ ಅನಿವಾಸಿ ಕೇರಳಿಗರ ಕಲ್ಯಾಣಕ್ಕಾಗಿ ಪ್ರತ್ಯೇಕ ಸರಕಾರಿ ಸ್ವಾಮ್ಯದ ಸಂಸ್ಥೆಯ ಮಾದರಿಯಲ್ಲೆ ರಾಜ್ಯದಲ್ಲೂ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸಬೇಕು. ಈ ಸಂಸ್ಥೆಯಲ್ಲಿ ಸರಕಾರದ ಪಾಲು ಶೇ.51ರಷ್ಟು, ಅನಿವಾಸಿ ಕನ್ನಡಿಗರ ಪಾಲು ಶೇ.49ರಷ್ಟಿರಬೇಕು.
ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಈ ಸಂಸ್ಥೆ ಅವಶ್ಯ. ಅನಿವಾಸಿ ಕನ್ನಡಿಗರ ವಿವಾಹ, ಶೈಕ್ಷಣಿಕ ಪ್ರಮಾಣ ಪತ್ರ, ವೀಸಾ ದೃಢೀಕರಣ ಸೇರಿದಂತೆ ಅನಿವಾಸಿಗರ ನೆರವಿಗೆ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಕೇರಳದಲ್ಲಿನ ‘ನೋರ್ಕಾ ರೂಡ್ಸ್’ ಹೆಸರಿನಲ್ಲಿ ಅನಿವಾಸಿ ಕೇರಳಿಗರ ಕಲ್ಯಾಣಕ್ಕಾಗಿ ಸಂಸ್ಥೆ ರೂಪಿಸಿದ್ದು, ಅನಿವಾಸಿ ಭಾರತೀಯ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ ಅನಿವಾಸಿ ಕನ್ನಡಿಗರ ಜಿಲ್ಲಾವಾರು ತಂತ್ರಾಂಶಗಳನ್ನು ಸಂಗ್ರಹಿಸಲು ತುರ್ತು ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಉದ್ಯೋಗ ಬಯಸುವ ಕನ್ನಡಿಗರಿಗೆ ಮಧ್ಯವರ್ತಿಗಳಿಂದ ವಂಚನೆ ಮತ್ತು ಶೋಷಣೆ ತಪ್ಪಿಸಲು ಜಾಬ್ ಪೋರ್ಟಲ್ ರಚಿಸಲು ಕ್ರಮ ಕೈಗೊಳ್ಳಬೇಕು.
ಕರಾವಳಿ ಭಾಗದ ಜನ ವಿದೇಶಗಳಲ್ಲಿ ನೆಲೆಸಿರುವುದರಿಂದ ಅನಿವಾಸಿ ಕನ್ನಡಿಗರ ಅನುಕೂಲಕ್ಕಾಗಿ ಅನಿವಾಸಿ ಭಾರತೀಯ ಭವನವನ್ನು ಮಂಗಳೂರಿನಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಏಕಗವಾಕ್ಷಿ ಪದ್ಧತಿ ಜಾರಿ, ಅನಿವಾಸಿ ಭಾರತೀಯರು ರಾಜ್ಯಕ್ಕೆ ಮರಳಿ ಬಂದು ಸ್ವಉದ್ಯೋಗವನ್ನು ಆರಂಭಿಸಲು ಬಯಸಿದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು.
ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 50 ಕೋಟಿ ರೂ.ಅನುದಾನವನ್ನು ಮಂಜೂರು ಮಾಡಬೇಕು. ನಂತರ ಪ್ರತಿ ವರ್ಷ ಈ ಅನುದಾನವನ್ನು ಹೆಚ್ಚಿಸಬೇಕು. ಶೇರು ಬಂಡವಾಳ ಹೂಡಿಕೆಗೆ ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂಬುದು ಸೇರಿದಂತೆ ಅನಿವಾಸಿಗರ ಕಲ್ಯಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.







