ಮರ್ಧಾಳ: 400 ಹಾಸಿಗೆಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ

ಕಡಬ, ಫೆ.8. ಮನುಷ್ಯ ಜೀವನದಲ್ಲಿ ಆರೋಗ್ಯಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಮನುಷ್ಯ ಆರೋಗ್ಯವಂತನಾಗಿದ್ದಲ್ಲಿ ಮಾತ್ರ ಜೀವನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಲು ಸಾಧ್ಯ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಬುಧವಾರದಂದು ಮನ್ಮಥ ಭಟ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಸ್ಪೇಸ್ ರಿಸರ್ಚ್ ಅಡ್ಮಿನಿಸ್ಟ್ರೇಶನ್ (ಮಯಸ್ರ) ಎಜುಕೇಶನಲ್ ಟ್ರಸ್ಟ್ ವತಿಯಿಂದ ಮರ್ಧಾಳದಲ್ಲಿ ಸುಮಾರು 100 ಕೋಟಿ ವೆಚ್ಚದ 400 ಹಾಸಿಗೆಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆಗೈದು ಮಾತನಾಡಿದರು.
ಆಧುನಿಕತೆಯ ಒತ್ತಡಗಳ ಮಧ್ಯೆ ಜನರನ್ನು ವಿವಿಧ ಖಾಯಿಲೆಗಳು ಬಾಧಿಸುತ್ತಿದ್ದು, ದೂರದ ಪೇಟೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದರ ಬದಲು ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಆರೋಗ್ಯ ಸೇವೆ ನೀಡಲು ಮುಂದೆ ಬಂದಿರುವ ಮನ್ಮಥ ಭಟ್ ನೇತೃತ್ವದ ಮಯಸ್ರ ಎಜುಕೇಶನಲ್ ಟ್ರಸ್ಟ್‌ನ ಚಿಂತನೆಯು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಯಸ್ರ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಮನ್ಮಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ತರ್ತು ವೈದ್ಯಕೀಯ ಸೇವೆ, ವೈದ್ಯಕೀಯ ಸಂಶೋಧನೆ, ಪುನರ್ ಬಳಕೆ ಇಂಧನ ಅಭಿವೃದ್ಧಿ, ವೈಮಾನಿಕ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆ, ಆಯುರ್ವೇದ ಸೇವೆಯೊಂದಿಗೆ ಗ್ರಾಮೀಣ ಜನರರಿಗೆ ಉತ್ತಮ ಆರೋಗ್ಯ ಸೇವೆಯನ್ನು ಬಹುತೇಕ ಉಚಿತವಾಗಿ ನೀಡಬೇಕೆನ್ನುವ ದೃಷ್ಟಿಯಿಂದ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ವೈದ್ಯಕೀಯ ಸೇವೆಯು ಉದ್ಯಮವಾಗಿ ಬೆಳೆದಿರುವ ಇಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಿರುವ ಮನ್ಮಥ ಭಟ್ ಹಾಗೂ ಅವರ ಸಂಸ್ಥೆಯನ್ನು ಶ್ಲಾಘಿಸಬೇಕಾಗಿದೆ ಎಂದರು. ಪುತ್ತೂರು ಐಆರ್‌ಸಿಎಸ್ ಅಧ್ಯಕ್ಷ ಆಸ್ಕರ್ ಆನಂದ್, ತಾ.ಪಂ. ಸದಸ್ಯರಾದ ಗಣೇಶ್ ಕೈಕುರೆ, ಪಿ.ವೈ.ಕುಸುಮಾ, ಮರ್ಧಾಳ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಸತೀಶ್, ಐತ್ತೂರು ಗ್ರಾ.ಪಂ.ಅಧ್ಯಕ್ಷೆ ಸತೀಶ್ ಕೆ. ಮಾತನಾಡಿದರು.
ಮರ್ಧಾಳ ಜುಮಾ ಮಸೀದಿಯ ಅಧ್ಯಕ್ಷರಾದ ಹಮೀದ್ ತಂಙಳ್, ತಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಪುಲಸ್ತ್ಯಾ ರೈ, ಆಸ್ಪತ್ರೆ ಕಟ್ಟಡದ ಆರ್ಕಿಟೆಕ್ಟರ್ ಕ್ರಿಸ್ಟೋಫರ್ ನೊರೊನ್ಹಾ, ಆಯುರ್ವೇದ ವೈದ್ಯ ಕಣಿಯೂರು ಕೃಷ್ಣ ಭಟ್, ಬಂಟ್ರ ಪಂಚಾಯತ್ ಮಾಜಿ ಪ್ರಧಾನ ಕೃಷ್ಣ ರೈ ಅಳೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.







