‘ಕೊಂಕಣಿ ಲೋಕೋತ್ಸವ-2017’ ಚಪ್ಪರ ಮುಹೂರ್ತ

ಮಂಗಳೂರು, ಫೆ.8: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ಫೆ.10ರಿಂದ 12ರವರೆಗೆ ನಗರದ ಪುರಭವನದಲ್ಲಿ ನಡೆಯಲಿರುವ ‘ಕೊಂಕಣಿ ಲೋಕೋತ್ಸವ-2017’ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮವು ಬುಧವಾರ ಪುರಭವನ ಮುಂಭಾಗದಲ್ಲಿ ನಡೆಯಿತು.
ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು, ‘ಕೊಂಕಣಿ ಲೋಕೋತ್ಸವ-2017’ ರಾಜ್ಯಾದ್ಯಂತ ಕೊಂಕಣಿ ಮಾತನಾಡುವ ಸಮುದಾಯದವರ ಹಬ್ಬವಾಗಿದೆ. ಮೂರು ದಿನ ನಡೆಯುವ ಈ ಹಬ್ಬದಲ್ಲಿ ಕೊಂಕಣಿ ಸಮುದಾಯದವರ ಕಲೆ, ಸಾಂಸ್ಕೃತಿಕ ಉತ್ಸವ ಮೇಳೈಸಲಿದೆ. ಕೊಂಕಣಿ ಸಮುದಾಯದ ಸಂಸ್ಕೃತಿ ಬಿಂಬಿಸುವ ವಿವಿಧ ಪ್ರದರ್ಶನ ಮಳಿಗೆಗಳು ಹಾಗು ಪ್ರಾಚೀನ ಕಲಾಕೃತಿಗಳ ಪ್ರದರ್ಶನವೂ ಉತ್ಸವದ ವಿಶೇಷತೆಯಾಗಿದೆ ಎಂದರು.
ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೊ, ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ, ಐರಿನ್ ರೆಬೆಲ್ಲೊ, ಸಂತೋಷ್ ಶೆಣೈ, ಜೇಮ್ಸ್ ಡಿಸೋಜ, ನವೀನ್ ಲೋಬೊ, ಇ. ಫರ್ನಾಂಡಿಸ್, ಲುವಿ ಜೆ. ಪಿಂಟೊ, ಲಾರೆನ್ಸ್ ಡಿಸೋಜ, ಗೀತಾ ಕಿಣಿ, ವಿಟೋರಿ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
ವಿಕ್ಟರ್ ಮಥಾಯಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು





