ನೂತನ್ ಸಾಖರ್ ದಾಂಡೆಗೆ ಕವಿತಾ ಟ್ರಸ್ಟ್ ಪುರಸ್ಕಾರ ಪ್ರದಾನ

ಮಂಗಳೂರು, ಫೆ.8: ನಗರದ ಕೆ.ಎಸ್. ರಾವ್ ರಸ್ತೆಯ ಗ್ಯಾಲರಿ ಓರ್ಕಿಡ್‌ನಲ್ಲಿ ಜರಗಿದ ಕವಿತಾ ಸಂಭ್ರಮ್ ಕಾರ್ಯಕ್ರಮದಲ್ಲಿ ಕೊಂಕಣಿ ಕವಿತೆಯ ವೃದ್ಧಿಗಾಗಿ ಶ್ರಮಿಸುತ್ತಿರುವ ಕವಿತಾ ಟ್ರಸ್ಟ್ ಕೊಡಮಾಡುವ ‘ಮಥಾಯಸ್ ಕುಟುಂಬ ಕವಿತಾ ಪುರಸ್ಕಾರ’ವನ್ನು ಗೋವೆಯ ಕೊಂಕಣಿ ಕವಯಿತ್ರಿ ನೂತನ್ ಸಾಖರ್‌ದಾಂಡೆಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು 25 ಸಾವಿರ ರೂ. ನಗದು, ಸ್ಮರಣಿಕೆ ಹಾಗು ಪ್ರಮಾಣಪತ್ರವನ್ನು ಒಳಗೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ, ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವದಲ್ಲಿ 7,000 ಭಾಷೆಗಳಿವೆ. ಆ ಪೈಕಿ ಅರ್ಧದಷ್ಟು ಭಾಷೆಗಳು ನಶಿಸಿ ಹೋಗಲಿವೆ. ಕೊಂಕಣಿಯಂತಹ ಭಾಷೆಗಳ ಪರಿಸ್ಥಿತಿಯೂ ಇದೇ ರೀತಿ ಆಗುವುದರಲ್ಲಿ ಸಂಶಯವಿಲ್ಲ. ಈಗಾಗಲೆ ಮನೆಗಳಿಂದ ಕೊಂಕಣಿ ಮಾಯವಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಈ ಸಂದರ್ಭ ಕೊಂಕಣಿಯ ಹಿರಿಯ ಕವಿಗಳಾದ ಎಂ. ಪಿ. ರೊಡ್ರಿಗಸ್ ‘ರಸ್ತಯ ದೆಗೆಚಿಂ ಫುಲಾಂ’ (ರಸ್ತೆ ಬದಿಯ ಹೂವುಗಳು) ಕವನ ಸಂಕಲನವನ್ನು ಶಾಸಕ ಜೆ.ಆರ್.ಲೊಬೊ ಬಿಡುಗಡೆಗೊಳಿಸಿದರು. ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೋರ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಉಪಸ್ಥಿತರಿದ್ದರು





