ಚೀನಾ-ಅಮೆರಿಕ ಸಂಘರ್ಷದಿಂದ ಯಾರಿಗೂ ಲಾಭವಿಲ್ಲ: ಬೀಜಿಂಗ್

ಸಿಡ್ನಿ, ಫೆ. 8: ದಕ್ಷಿಣ ಚೀನಾ ವಿಷಯದಲ್ಲಿ ಚೀನಾ ಮತ್ತು ಅಮೆರಿಕಗಳ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆಯನ್ನು ಬೀಜಿಂಗ್ ತಳ್ಳಿ ಹಾಕಿದೆ. ಇದರಿಂದ ಎರಡೂ ದೇಶಗಳಿಗೆ ಹಾನಿಯಿದೆ ಎಂದಿದೆ.
ಸಂಪನ್ಮೂಲ ಸಂಪದ್ಭರಿತ ಇಡೀ ದಕ್ಷಿಣ ಚೀನಾ ಸಮುದ್ರ ತನತೆ ಸೇರಿದ್ದು ಎಂದು ಚೀನಾ ಹೇಳುತ್ತಿದೆ. ಅದೇ ವೇಳೆ, ಈ ವಲಯದ ಇತರ ದೇಶಗಳೂ ಸಮುದ್ರದ ವಿವಿಧ ಭಾಗಗಳ ಮೇಲೆ ತಮ್ಮ ಹಕ್ಕುಗಳನ್ನು ಸ್ಥಾಪಿಸುತ್ತಿವೆ.
ಸಮುದ್ರದ ವಿವಿಧ ಭಾಗಗಳಲ್ಲಿರುವ ಹವಳ ದಿಬ್ಬಗಳನ್ನು ಚೀನಾ ಕೃತಕ ದ್ವೀಪಗಳನ್ನಾಗಿ ಪರಿವರ್ತಿಸಿದ್ದು, ಯುದ್ಧ ವಿಮಾನಗಳ ಹಾರಾಟಕ್ಕೆ ಅಲ್ಲಿ ವ್ಯವಸ್ಥೆಗಳನ್ನು ಮಾಡುತ್ತಿದೆ.
ಕೃತಕ ದ್ವೀಪಗಳ ಬಗ್ಗೆ ಆಕ್ಷೆಪ ವ್ಯಕ್ತಪಡಿಸಿ ಶ್ವೇತಭವನದ ವಕ್ತಾರ ಸಿಯನ್ ಸ್ಪೈಸರ್ ಮತ್ತು ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ನೀಡಿರುವ ಹೇಳಿಕೆಗಳು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವೆ.ಆದರೆ, ಯುದ್ಧದಿಂದ ಯಾರಿಗೂ ಲಾಭವಿಲ್ಲ ಎಂದು ಆಸ್ಟ್ರೇಲಿಯ ಪ್ರವಾಸದಲ್ಲಿರುವ ಚೀನಾ ವಿದೇಶ ಸಚಿವ ವಾಂಗ್ ಯಿ ಹೇಳಿದ್ದಾರೆ.
‘‘ಚೀನಾ ಮತ್ತು ಅಮೆರಿಕಗಳ ನಡುವೆ ಸಂಘರ್ಷವಿರಬಾರದು ಎಂಬ ನಿಲುವಿಗೆ ಸ್ಪಷ್ಟವಾಗಿ ಯೋಚಿಸುವ ಯಾವುದೇ ರಾಜಕಾರಣಿ ಬರುತ್ತಾನೆ’’ ಎಂದು ಅವರು ಮಂಗಳವಾರ ಕ್ಯಾನ್‌ಬೆರದಲ್ಲಿ ಹೇಳಿದರು ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ವರದಿ ಮಾಡಿದೆ.
‘‘ಎರಡೂ ದೇಶಗಳು ಸೋಲುತ್ತವೆ ಹಾಗೂ ಇದನ್ನು ತಾಳಿಕೊಳ್ಳುವ ಸಾಮರ್ಥ್ಯ ಎರಡೂ ದೇಶಗಳಿಗಿಲ್ಲ’’ ಎಂದರು.







