ಪನ್ನೀರ್‌ಸೆಲ್ವಂರಿಂದ ಮೋದಿ ಸರಕಾರದ ಗುಣಗಾನ!

ಚೆನ್ನೈ,ಫೆ.9: ಶಶಿಕಲಾ ವಿರುದ್ಧ ಸಿಡಿದೇಳಲು ತನಗೆ ಬಿಜೆಪಿ ಕುಮ್ಮಕ್ಕು ನೀಡಿಲ್ಲವೆಂದು ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಇಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಕೇಂದ್ರದ ಎನ್‌ಡಿಎ ಸರಕಾರ ತನಗೆ ನೀಡಿದ ಸಹಕಾರವನ್ನು ಪ್ರಶಂಸಿಸಿದ ಅವರು, ರವಿವಾರ ತಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಕೇಂದ್ರ ಸರಕಾರ ತನ್ನನ್ನು ಕೇಳಿಕೊಂಡ ಆನಂತರವೇ ತಾನು ಅಧಿಕಾರದಲ್ಲಿ ಮುಂದುವರಿದಿರುವುದಾಗಿ ಅವರು ತಿಳಿಸಿದರು.
ಡಿಸೆಂಬರ್‌ನಲ್ಲಿ ಜಯಲಲಿತಾ ನಿಧನದ ಬಳಿಕ ಅವರ ಶೋಕತಪ್ತ ಕೋಟ್ಯಂತರ ಬೆಂಬಲಿಗರನ್ನು ನಿಭಾಯಿಸುವಲ್ಲಿ ಹಾಗೂ ತೀರಾ ಇತ್ತೀಚೆಗೆ ಜಲ್ಲಿಕಟ್ಟು ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು, ಶಿಸ್ತನ್ನು ಕಾಪಾಡುವಲ್ಲಿ ತನ್ನ ಸಾಧನೆಯನ್ನು ಕೇಂದ್ರ ಪ್ರಶಂಸಿಸಿರುವುದಾಗಿ ಪನ್ನೀರ್ ತಿಳಿಸಿರು.
ಶಶಿಕಲಾ ಅವರಿಗಿಂತ ಓ.ಪನ್ನೀರ್‌ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕೆ ಬಿಜೆಪಿ ಒಲವು ವ್ಯಕ್ತುಪಡಿಸಿತ್ತೆನ್ನಲಾಗಿದೆ.
ಎಡಿಎಂಕೆ ಒಡಕಿನಲ್ಲಿ ಬಿಜೆಪಿ ಪಾತ್ರವಿಲ್ಲ: ನಾಯ್ಡುಈ ಮಧ್ಯೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಎಡಿಎಂಕೆಯಲ್ಲಿ ಒಡಕು ಮೂಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಪ್ರಸಕ್ತ ಬಿಕ್ಕಟ್ಟಿನಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲವೆಂದವರು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ರಾಜ್ಯಪಾಲ ವಿದ್ಯಾಸಾಗರ್‌ರಾವ್ ಅವರು ಚೆನ್ನೈಗೆ ಆಗಮಿಸದಿರುವುದರಿಂದ, ಶಶಿಕಲಾ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ವಿಳಂಬವುಂಟಾಗಿದೆ. ಆದಾಗ್ಯೂ ಈ ವಿಷಯವಾಗಿ ಯಾವ ರೀತಿಯಲ್ಲಿ ಮುಂದುವರಿಯಬೇಕೆಂಬ ಬಗ್ಗೆ ರಾಜ್ಯಪಾಲರು ಕೇಂದ್ರದ ಜೊತೆ ಸಂಪರ್ಕದಲ್ಲಿರುವುದಾಗಿ ಮೂಲಗಳು ತಿಳಿಸವೆ.
ಕಳೆದ ರವಿವಾರ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಪನ್ನೀರ್‌ಸೆಲ್ವಂ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದರೂ, ಹುದ್ದೆಯಲ್ಲಿ ತಾತ್ಕಾಲಿಕವಾಗಿ ಮುಂದುವರಿಯುವಂತೆ ಸೂಚಿಸಿದ್ದರು. ದಿಲ್ಲಿಯಲ್ಲಿ ಕೇಂದ್ರ ಸಚಿವರೊಬ್ಬರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಚೆನ್ನೈಗೆ ಆಗಮಿಸುವ ಬದಲು ಮುಂಬೈಗೆ ತೆರಳಿರುವುದು ಹಲವರ ಹುಬ್ಬೇರಿಸಿತ್ತು.
ಮೋದಿಯಿಂದ ಇನ್ನೊಂದು ಸರಕಾರ ಪತನಕ್ಕೆ ಯತ್ನ: ಕಾಂಗ್ರೆಸ್
ಈ ಮಧ್ಯೆ ಶಶಿಕಲಾ ಅವರ ಪ್ರಮಾಣವಚನ ಸ್ವೀಕಾರವನ್ನು ರಾಜ್ಯಪಾಲರು ವಿಳಂಬಿಸುತ್ತಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಮೋದಿ ಸರಕಾರವು ಇನ್ನೊಂದು ಸರಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆಯೆಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜಿವಾಲಾ ಆರೋಪಿಸಿದ್ದಾರೆ.







